ಮೀಸಲಾತಿ ಪ್ರಮಾಣ ಶೇ.72ಕ್ಕೆ ಏರಿಕೆಗೆ ಚಿಂತನೆ: ಸಿದ್ದರಾಮಯ್ಯ

ಬೆಂಗಳೂರು, ಮಾ.26: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.72ಕ್ಕೆ ಏರಿಕೆ ಮಾಡಲು ಸಂವಿಧಾನದ ಚೌಕಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.
ರವಿವಾರ ಕರ್ನಾಟಕ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಗರದ ಆರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಕೃತಜ್ಞತಾ ಸಮಾವೇಶ’ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ತಮಿಳುನಾಡಿನಲ್ಲಿ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.69ಕ್ಕೆ ಏರಿಕೆ ಮಾಡಿದೆ. ಅದೇ ಮಾದರಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.
ಗಣತಿ ವರದಿ ಶೀಘ್ರ ಜಾರಿ: ಸಾಮಾಜಿಕ-ಆರ್ಥಿಕ ಸಮೀಕ್ಷಾ ಸಂಪೂರ್ಣ ಮುಗಿದಿದ್ದು, ಶೀಘ್ರದಲ್ಲೇ ವರದಿಯನ್ನು ಬಿಡುಗಡೆಗೊಳಿಸಲಾಗುವುದು. ಈ ಸಮೀಕ್ಷೆಯ ಆಧಾರವಾಗಿಟ್ಟು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಎಲ್ಲ ಜಾತಿಯ ಬಡವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಜನಸಂಖ್ಯೆಗೆ ಅನುಸಾರವಾಗಿ ಎಸ್ಸಿಪಿ-ಟಿಎಸ್ಪಿ ಯೋಜನೆಯ ಅನುದಾನವನ್ನು ಕೊಡಲಾಗಿದೆ. ಇದೇ ಮಾದರಿಯಲ್ಲಿ ಎಲ್ಲ ರಾಜ್ಯದಲ್ಲೂ ಎಸ್ಸಿ,ಎಸ್ಟಿ ಜನಸಂಖ್ಯೆಗೆ ಅನುಸಾರವಾಗಿ ಅನುದಾನ ಬಿಡುಗಡೆ ಮಾಡುವಂತೆ ದಲಿತ ಸಂಘಟನೆಗಳು ಒತ್ತಡ ಹಾಕಬೇಕೆಂದು ಅವರು ಸಲಹೆ ಮಾಡಿದರು.
ಹೋಬಳಿಗೊಂದು ವಸತಿ ಶಾಲೆ: ದಸಂಸ ಪ್ರಾರಂಭದ ದಿನಗಳಲ್ಲಿ ನಾನು ಆ ಸಂಘಟನೆಗಳ ಸಭೆಗಳಿಗೆ ಹೋಗುತ್ತಿದ್ದೆ. ಆ ದಿನಗಳಲ್ಲಿ ದಸಂಸ ಸಂಘಟನೆಯ ಪ್ರಮುಖ ಬೇಡಿಕೆ ಹೋಬಳಿಗೊಂದು ವಸತಿ ಶಾಲೆಗಳನ್ನು ನಿರ್ಮಿಸಬೇಕೆಂಬುದು. ಅವರ ಆ ದಿನದ ಆಸೆಯನ್ನು ಈಗ ಈಡೇರಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.
ದಲಿತ ಸಮುದಾಯಕ್ಕೆ ರಾಜಕಿಯ ಸ್ಥಾನಮಾನ ಸಿಕ್ಕರೆ ಸಾಲದು. ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮಾತ್ರ ದೇಶದಲ್ಲೇ ದಲಿತ ಸಮುದಾಯಕ್ಕೆ ಅತಿ ಹೆಚ್ಚು ಅನುದಾನ ನೀಡಿ, ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಕಾಂಗ್ರೆಸ್ ಪಕ್ಷದ ನಿಜವಾದ ಆಶಯ ರಾಜ್ಯದಲ್ಲಿ ಈಡೇರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೀಸಲಾತಿಯ ಹರಿಕಾರ ಸಾಹು ಮಹಾರಾಜರ ಮಾದರಿಯಲ್ಲಿ ಪೇಟ ತೊಡಿಸಿ, ಖಡ್ಗ ನಿೀಡಿ ಸನ್ಮಾನಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಸಂಸದ ಡಾ.ಕೆ.ಎಚ್.ಮುನಿಯಪ್ಪ ಮಾತನಾಡಿದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಣ್ಣ ಕೈಗಾರಿಕೆ ಸಚಿವ ರಮೇಶ್ ಕುಮಾರ್, ಸಂಸದ ಪ್ರಕಾಶ್ ಹುಕ್ಕೇರಿ, ಸಂಸದ ಬಿ. ಎನ್.ಚಂದ್ರಪ್ಪ, ಅರಣ್ಯ ಸಚಿವ ರಮನಾಥ ರೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ , ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಮತ್ತಿತರರಿದ್ದರು.







