ಅಮೆರಿಕದ ನೈಟ್‌ಕ್ಲಬ್‌ನಲ್ಲಿ ಶೂಟೌಟ್ : ಓರ್ವ ಬಲಿ; 15ಕ್ಕೂ ಅಧಿಕ ಮಂದಿಗೆ ಗಾಯ
ದಾಳಿಯ ಬಳಿಕ ಹಂತಕರು ಪರಾರಿ

ಸಿನ್‌ಸಿನಾಟಿ,ಮಾ.26: ಫ್ಲಾರಿಡಾದ ನೈಟ್‌ಕ್ಲಬ್ ಹತ್ಯಾಕಾಂಡದ ಕರಾಳನೆನಪು ಮಾಸುವ ಮುನ್ನವೇ ಅಮೆರಿಕದ ಇನ್ನೊಂದು ನೈಟ್‌ಕ್ಲಬ್‌ನಲ್ಲಿ ರಕ್ತದೋಕುಳಿ ಹರಿದಿದೆ. ಒಹಿಯೊ ರಾಜ್ಯದ ಸಿನ್‌ಸಿನಾಟಿ ನಗರದ ನೈಟ್‌ಕ್ಲಬ್ಬೊಂದರಲ್ಲಿ ರವಿವಾರ ಮುಂಜಾನೆ ಕನಿಷ್ಠ ಇಬ್ಬರು ಬುಂಧೂಕುದಾರಿಗಳು ನಡೆಸಿದ ಶೂಟೌಟ್‌ನಲ್ಲಿ ಓರ್ವ ಮೃತಪಟ್ಟಿದ್ದು, ಇತರ 15 ುಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿನ್‌ಸಿನಾಟಿ ನಗರದ ಕ್ಯಾಮಿಯೊ ನೈಟ್‌ಲೈಫ್ ಕ್ಲಬ್‌ನಲ್ಲಿ ರವಿವಾರ ಮುಂಜಾನೆ ಒಂದು ಗಂಟೆಯ ವೇಳೆಗೆ ಶೂಟೌಟ್ ನಡೆದಿರುವುದಾಗಿ ನಗರದ ಪೊಲೀಸರು ತಿಳಿಸಿದ್ದಾರೆ. ಆದರೆ ಇದೊಂದು ಭಯೋತ್ಪಾದಕ ದಾಳಿಯೇ ಎಂದು ಈವರೆಗೆ ಖಚಿತವಾಗಿಲ್ಲವೆಂದು ಸಿನ್‌ಸಿನಾಟಿ ಪೊಲೀಸ್ ಇಲಾಖೆಯ ಮುಖ್ಯಸ್ಥ ಕ್ಯಾಪ್ಟನ್ ಕಿಂಬರ್ಲಿ ವಿಲಿಯಮ್ಸ್ ಹೇಳಿದ್ದಾರೆ. ಕನಿಷ್ಠ ಇಬ್ಬರು ಗುಂಡಿನ ದಾಳಿಯನ್ನು ನಡೆಸಿದ್ದು, ಘಟನೆಯ ಬಳಿ ಪರಾರಿಯಾಗಿದ್ದರೆ. ಅವರ ಪತ್ತೆಗಾಗಿ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಈವರೆಗೆ ಹಂತಕರ ಗುರುತು ಪತ್ತೆಯಾಗಿಲ್ಲವೆಂದು ಅವರು ಹೇಳಿದ್ದಾರೆ.
ಶೂಟೌಟ್ ನಡೆದ ಸಂದರ್ಭದಲ್ಲಿ ನೂರಾರು ಮಂದಿ ನೈಟ್‌ಕ್ಲಬ್‌ನಲ್ಲಿದ್ದರು ಎಂದು ಕ್ಯಾಪ್ಟನ್ ವಿಲಿಯಮ್ಸ್ ತಿಳಿಸಿದ್ದಾರೆ. ಕ್ಯಾಮಿಯೊ ನೈಟ್‌ಕ್ಲಬ್‌ನಲ್ಲಿ ಈ ಹಿಂದೆಯೂ ಕೆಲವು ಸಮಸ್ಯೆಗಳು ಉಂಟಾಗಿದ್ದವು. ಆದರೆ ಈ ಸಲದ ಘಟನೆ ಮಾತ್ರ ಅತ್ಯಂತ ಭೀಭತ್ಸವಾದುದಾಗಿದೆ ಎಂದವರು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಲ್ಲಿ ಕೆಲವರನ್ನು ಸಿನ್‌ಸಿನಾಟಿ ವೈದ್ಯಕೀಯ ವಿವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ನೈಟ್‌ಕ್ಲಬ್‌ನಲ್ಲಿದ್ದ ಹಲವರನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ದಾಳಿ ನಡೆಸಲಾಗಿದೆಯೆಂಬ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ೊರೆತಿಲ್ಲವೆಂದು ಅವರು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಫ್ಲೋರಿಡಾದ ಒರ್ಲಾಂಡೊ ನಗರದಲ್ಲಿ ಸಲಿಂಗಿಗಳ ನೈಟ್‌ಕ್ಲಬ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನದಾಳಿಯಲ್ಲಿ 49 ಮಂದಿ ಮೃತಪಟ್ಟು 53 ಮಂದಿ ಗಾಯಗೊಂಡಿದ್ದರು ಈ ಘಟನೆಯ ಕರಾಳ ನೆನಪು ಮಾಸಿಹೋಗುವ ಮುನ್ನವೇ ಅಮೆರಿಕದಲ್ಲಿ ಮತ್ತೊಮ್ಮೆ ನೈಟ್‌ಕ್ಲಬ್‌ನಲ್ಲಿ ಶೂಟೌಟ್ ನಡೆದಿದೆ.







