ಎರಡು ತಿಂಗಳಲ್ಲಿ ಕೂರಾಡಿ ಸೇತುವೆ ಸಿದ್ಧ: ಸಚಿವ ಪ್ರಮೋದ್

ನೀಲಾವರ (ಬ್ರಹ್ಮಾವರ), ಮಾ.26: ಉಡುಪಿ ತಾಲೂಕಿನ ನೀಲಾವರದ ಪಂಚಮಿಖಾನ ಎಂಬಲ್ಲಿ ಸೀತಾ ನದಿಗೆ ಅಡ್ಡಲಾಗಿ ಕೇಂದ್ರ ರಸ್ತೆ ನಿಧಿ ಯೋಜನೆ (ಸಿಆರ್‌ಎಫ್)ಯಡಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಮೇ ತಿಂಗಳ ಕೊನೆಯೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೀಲಾವರ ಹಾಗೂ ಕೂರಾಡಿಯನ್ನು ಸಂಪರ್ಕಿಸುವ ಈ ಸೇತುವೆ ಸಿಆರ್‌ಎಫ್ ಫಂಡ್‌ನ 9 ಕೋಟಿ ರೂ. ವೆಚ್ಚದಲ್ಲಿ ಪಂಚಮಿಖಾನ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ. ಸೇತುವೆ ಕಾಮಗಾರಿ ಶೇ.80ರಷ್ಟು ಮುಗಿದಿದ್ದು, ಮೇ ತಿಂಗಳ ಕೊನೆಯ ವೇಳೆಗೆ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ ಎಂದರು.
ರವಿವಾರ ನೀಲಾವರದಲ್ಲಿ ಸೇತುವೆಯ ಕಾಮಗಾರಿಯ ಪ್ರಗತಿ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಈಗಾಗಲೇ ಗುತ್ತಿಗೆದಾರ ರಿಗೆ ಶೇ.70ರಷ್ಟು ಪಾವತಿ ಮಾಡಲಾಗಿದೆ. ಆಸ್ಕರ್ ಅವರು ಕೇಂದ್ರ ಸಚಿವ ರಾಗಿದ್ದ ಈ ಸೇತುವೆಯನ್ನು ಉತ್ತರ ಕನ್ನಡದ ಪಟ್ಟಿಯಡಿ ಸೇರಿಸಿ ಅನುಮೋದನೆ ಪಡೆಯಲಾಗಿತ್ತು ಎಂದರು.
ಸೇತುವೆಯ ಉದ್ದ 128ಮೀ. ಇದ್ದು, 21.37 ಮೀ.ನ ಒಟ್ಟು 6 ಅಂಕಣ ಗಳನ್ನು ಹೊಂದಿದೆ. ಸೇತುವೆ ಅಗಲ 7.50 ಮೀ. ಇದ್ದು ಎರಡು ವಾಹನಗಳು ಸರಾಗವಾಗಿ ಸಂಚರಿಸಬಹುದಾಗಿದೆ. ಆರ್‌ಸಿಸಿ ಟಿ-ಬೀಮ್ ಡೆಕ್‌ಸ್ಲಾಬ್ ಹಾಗೂ ಪೈಲ್ ಪೌಂಡೇಶನ್ ಹಾಕಲಾಗಿದೆ. ಇನ್ನು ರಿವೈಟ್‌ಮೆಂಟ್ ಕೆಲಸವಷ್ಟೇ ಬಾಕಿ ಇದೆ ಎಂದು ಸಚಿವರು ನುಡಿದರು.
ಸೇತುವೆಯ ಎರಡೂ ಕಡೆಗೆ -ನೀಲಾವರ ಹಾಗೂ ಕೂರಾಡಿ- ತಲಾ ಒಂದು ಕಿ.ಮೀ. ಉದ್ದದ ಸಂಪರ್ಕ ಸೇತುವೆಯನ್ನು ತಲಾ 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕೆ ಭೂಸ್ವಾದೀನದ ಅಗತ್ಯವಿರುವುದಿಲ್ಲ. ಸಂಪರ್ಕ ರಸ್ತೆ 5.50ಮೀ. ಅಗಲವಿರುತ್ತದೆ ಎಂದರು.
ಭೇಟಿಯ ವೇಳೆ ಸಚಿವರೊಂದಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಕೆಡಿಪಿ ಸದಸ್ಯ ಉಮೇಶ್ ನಾಯ್ಕಿ, ಉಡುಪಿ ನಗರಸಭಾ ಸದಸ್ಯ ಜನಾರ್ದನ ಭಂಡಾರ್‌ಕರ್,ರಮೇಶ್ ಕಾಂಚನ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಡಿ.ವಿ.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.







