ರಂಗಭೂಮಿ ಜನಜೀವನದ ಪ್ರತಿಬಿಂಬ: ಅಂಬಾತನಯ ಮುದ್ರಾಡಿ

ಉಡುಪಿ, ಮಾ.26: ನಮ್ಮನ್ನು ನಾವೇ ನೋಡಿಕೊಳ್ಳುವ ಮಾಧ್ಯಮವಾಗಿ ರುವ ರಂಗಭೂಮಿಯು ಜನಜೀವನದ ಪ್ರತಿಬಿಂಬ, ಗತಿಬಿಂಬ ಹಾಗೂ ದೀಪಸ್ತಂಭ ಆಗಿದೆ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ವಿಶ್ವರಂಗ ಭೂಮಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಗ್ರೀಕ್, ಇಂಗ್ಲೆಂಡ್ ಹಾಗೂ ಭಾರತೀಯ ರಂಗಭೂಮಿಗಳು ಅತ್ಯಂತ ಪ್ರಾಚೀನ ಹಾಗೂ ಮಹತ್ವಪೂರ್ಣವಾದದ್ದು. ಭಾರತೀಯ ರಂಗಭೂಮಿ ಯು ಪರಂಪರೆ ಮತ್ತು ಸಾಧ್ಯತೆಯನ್ನು ತೋರಿಸಿಕೊಡುತ್ತದೆ ಎಂದ ಅವರು, ಇಂದು ಕಾಲೋಚಿತವಾದ ಬದಲಾವಣೆಗಳು ನಾಟಕಗಳಲ್ಲಿ ಆಗುತ್ತಿದೆ. ನಾಟಕಗಳು ಕೃತಿ ಕೇಂದ್ರೀತದ ಬದಲು ನಿರ್ದೇಶಕ ಕೇಂದ್ರೀತವಾಗುತ್ತಿವೆ. ಒಳ್ಳೆಯ ನಾಟಕ ದೃಶ್ಯ ಕಾವ್ಯ ಆಗಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮಾತನಾಡಿ, ಯಾವುದೇ ದೇಶದ ಇತಿಹಾಸವನ್ನು ಅವಲೋಕಿಸಿದಾಗ ಅಲ್ಲಿನ ರಂಗಭೂಮಿ ಅತ್ಯಂತ ಚಟುವಟಿಕೆಯಿಂದ ಇರುವುದು ಕಂಡುಬರುತ್ತದೆ. ಭಾಷೆಯ ನೆಲೆ ಯಲ್ಲಿ ಮತ್ತು ಜನ ಸಂಸ್ಕೃತಿಯ ವಿಷಯದಲ್ಲಿಯೂ ರಂಗಭೂಮಿಯನ್ನು ಅಭಿವ್ಯಕ್ತಿಯ ಮಾದರಿಯಾಗಿ ಬೆಳೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಭೂಮಿಯ ಹಿರಿಯ ಸಂಘಟಕ ಯು.ದಾಮೋ ದರ್ ಹಾಗೂ ಹರಿಣಿ ದಾಮೋದರ್ ದಂಪತಿಯನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಉದ್ಯಮಿ ರಾಘವೇಂದ್ರ ಕಿಣಿ ಮಾತನಾಡಿದರು. ಗೀತಂ ಗಿರೀಶ್ ರಂಗಭೂಮಿ ದಿನಾಚರಣೆಯ ಸಂದೇಶ ವಾಚಿಸಿದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು. ಎಚ್.ಪಿ.ರವಿರಾಜ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ರಂಗಭೂಮಿ ತಂಡದಿಂದ ಕಿವಿಮಾತು ಬೀದಿನಾಟಕ ಮತ್ತು ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ರಂಗ ಸಂಗಾತಿ ತಂಡದಿಂದ ಱಕೇಳೆ ಸಖಿ ಚಂದ್ರಮುಖಿೞನಾಟಕ ಪ್ರದರ್ಶನ ಗೊಂಡಿತು.







