ಶ್ರೀನಿವಾಸ ಪ್ರಸಾದ್ ಆರೋಪ 100ಕ್ಕೆ 100 ಸುಳ್ಳು: ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಉಡುಪಿ, ಮಾ.26: ಪ್ರಮೋದ್ ಮಧ್ವರಾಜ್ ಅವರು ಸಚಿವಗಿರಿಗಾಗಿ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ 10 ಕೋಟಿ ರೂ.ಲಂಚ ನೀಡಿದ್ದಾರೆ ಎಂಬ ಸಿದ್ಧರಾಮಯ್ಯ ಸರಕಾರದ ಸಚಿವನಾಗಿದ್ದು, ಇದೀಗ ಬಿಜೆಪಿಗೆ ಸೇರ್ಪಡೆಗೊಂಡು ಈಗ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶ್ರೀನಿವಾಸ ಪ್ರಸಾದ್ ಮಾಡಿರುವ ಆರೋಪವನ್ನು ನಿರಾಕರಿಸಿರುವ ಪ್ರಮೋದ್ ಮಧ್ವರಾಜ್, ಇದು 100ಕ್ಕೆ 100ರಷ್ಟು ಸುಳ್ಳು ಎಂದು ತಳ್ಳಿಹಾಕಿದರು.
ಬ್ರಹ್ಮಾವರ ಸಮೀಪದ ನೀಲಾವರ ಪಂಚಮಿಖಾನ ಬಳಿ ಸೀತಾ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ವೀಕ್ಷಣೆಗಾಗಿ ಆಗಮಿಸಿದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ನಾನು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ. ಒಂದು ಪೈಸೆಯೂ ಲಂಚ ತೆಗೆದುಕೊಳ್ಳುವವನಲ್ಲ ಎಂಬುದು ಇಡೀ ಕರ್ನಾಟಕದ ಜನತೆಗೆ ಹಾಗೂ ನನ್ನ ಇಲಾಖೆಗೆ ಗೊತ್ತಿದೆ. ದುಡ್ಡು ಮಾಡಬೇಕು ಎಂಬುವವರು ಮಂತ್ರಿ ಯಾಗಲು ದುಡ್ಡು ಕೊಡುತ್ತಾರೊ ಗೊತ್ತಿಲ್ಲ. ಆದರೆ ನಾನು ದುಡ್ಡು ಮಾಡದೇ ಜನರ ಸೇವೆ ಮಾಡಲು ಬಂದವನು ದುಡ್ಡು ಯಾಕೆ ಕೊಡುತ್ತೇನೆ ಎಂದು ಖಾರವಾಗಿ ನುಡಿದರು.
ಆದುದರಿಂದ ಶ್ರೀನಿವಾಸ ಪ್ರಸಾದ್ ಅವರ ಹೇಳಿಕೆ ನೂರಕ್ಕೆ ನೂರು ಸುಳ್ಳು. ಮತ್ತೆ ಪ್ರಸಾದ್ ಅವರ ಜೊತೆ 9 ತಿಂಗಳು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಎಷ್ಟು ಪ್ರಾಮಾಣಿಕತನದಿಂದ ಕೆಲಸ ಮಾಡಿದ್ದೇನೆ ಎಂಬುದು ಅವರಿಗೆ ಗೊತ್ತಿದೆ ಎಂದರು.
ಸಚಿವನಾಗಿ ನಾನು ಯಾವುದೇ ಫೈಲ್‌ನ್ನು ನನ್ನೆದುರು ಬಂದ ಒಂದು ಗಂಟೆ ಯೊಳಗೆ ವಿಲೇವಾರಿ ಮಾಡುತ್ತೇನೆ. ನನ್ನಷ್ಟು ವೇಗವಾಗಿ ಕಡತ ವಿಲೇವಾರಿ ಮಾಡುವ ಇನ್ನೊಬ್ಬ ಮಂತ್ರಿಯನ್ನು ಶ್ರೀನಿವಾಸ ಪ್ರಸಾದ್ ತೋರಿಸಲಿ ಎಂದು ಪ್ರಮೋದ್ ಸವಾಲು ಹಾಕಿದರು.
ಶ್ರೀನಿವಾಸ ಪ್ರಸಾದ್ ಅವರು ಚುನಾವಣಾ ಪ್ರಚಾರದ ವೇಳೆ ಯಾವ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ ಎಂದು ಪ್ರಶ್ನಿಸಿದಾಗ, ಪಾಪ! ಅವರಿಗೆ ಪ್ರಾಯ ಎಷ್ಟಾಯಿತು ಹೇಳಿ ಎಂದು ನಕ್ಕರು.







