ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಕಡೂರು, ಮಾ.26: ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಡೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ರಂಗಾಪುರದ ಕವಿತಾ(38) ಎಂದು ಗುರುತಿಸಲಾಗಿದೆ. ಈಕೆ ಕಡೂರು ತಾಲೂಕಿನ ರಂಗಾಪುರದ ಪ್ರಕಾಶ್ ಎಂಬವರ ಪತ್ನಿಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಬೆಂಗಳೂರಿನಲ್ಲಿದ್ದರು. ಕಳೆದ 6 ತಿಂಗಳ ಹಿಂದೆ ತಮ್ಮ ಸ್ವಗ್ರಾಮ ರಂಗಾಪುರಕ್ಕೆ ಬಂದು ಗಂಡನ ಜೊತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ರಂಗಾಪುರದಲ್ಲಿರುವ ತಮ್ಮ ಮನೆಯಲ್ಲಿ ಕವಿತಾ ದಾಳಿಂಬೆ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಮುಖಂಡ ರಾಜಣ್ಣ, ಅಶೋಕ, ಜಯಪ್ಪ ಸೇರಿದಂತೆ ಅನೇಕರು ಕಡೂರು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಆಸ್ಪತ್ರೆಯಲ್ಲೇ ಅಸುನೀಗಿದರು. ವಿಷಯ ತಿಳಿದು ಶಾಸಕ ವೈ.ಎಸ್.ವಿ.ದತ್ತ ಆಸ್ಪತ್ರೆಗೆ ಭೇಟಿ ನೀಡಿ ಕವಿತಾ ಕುಟುಂಬದವರಿಗೆ ವೈಯಕ್ತಿಕವಾಗಿ 10 ಸಾವಿರ ರೂ. ನಗದು ಹಣವನ್ನು ನೀಡಿ ಸಾಂತ್ವನ ಹೇಳಿದರು.
ಆತ್ಮಹತ್ಯೆ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





