ಮಹಿಳೆಯ ಸಾವು: ಕೊಲೆ ಶಂಕೆ
ಮೂಡಿಗೆರೆ, ಮಾ.26: ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕನೋರ್ವನ ಜೊತೆ ವಿವಾಹವಾಗದೇ, ಜೊತೆಯಲ್ಲಿ ಬದುಕುತ್ತಿದ್ದ ಮಹಿಳೆಯೋರ್ವಳು ರವಿವಾರ ಮನೆಯಲ್ಲಿ ಸಾವನ್ನಪ್ಪಿದ್ದು, ಸಾರ್ವಜನಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯನ್ನು ಭೂದೇವಿ (40) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಹೊಸಳ್ಳಿ ಗ್ರಾಮದವರಾಗಿದ್ದಾರೆ. ಕಳೆದ 10 ವರ್ಷಗಳಿಂದ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನರಸಪ್ಪ ಎಂಬವರ ಜೊತೆ ಮೂಡಿಗೆರೆ ಪಟ್ಟಣದಲ್ಲಿ ಬದುಕು ಸಾಗಿಸುತ್ತಿದ್ದರು. 8 ತಿಂಗಳಿಂದ ಬಾಲಕಿಯರ ಕಾಲೇಜಿನ ಎದುರುಗಡೆಯ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದರು. ರವಿವಾರ ಬೆಳಗ್ಗೆ ಭೂದೇವಿ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದ್ದು, ಸಂಜೆ ವೇಳೆಗೆ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾಯಿಯಲ್ಲಿ ನೊರೆ ಹೊರ ಬರುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಭೂದೇವಿ ಮದ್ಯ ಸೇವನೆಯಿಂದ ಮೃತಪಟ್ಟಿರುವುದಾಗಿ ನರಸಪ್ಪ ಪೊಲೀಸರಿಗೆ ತಿಳಿಸಿದ್ದಾನೆ. ಸಂಜೆ ವೃತ್ತ ನಿರೀಕ್ಷಕ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆಯ ಅಸಹಜ ಸಾವು ಕುರಿತು ಮೂಡಿಗೆರೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





