ಗೂಂಡಾ ಕಾಯ್ದೆಯಡಿ ರೌಡಿ ಬಾಲು ಬಂಧನ:
ಕಲಬುರಗಿ ಜೈಲಿಗೆ ಸ್ಥಳಾಂತರ
ಶಿವಮೊಗ್ಗ, ಮಾ.26: ರೌಡಿಸಂ ಕೃತ್ಯಗಳಲ್ಲಿ ನಿರಂತರ ವಾಗಿ ಭಾಗಿಯಾಗಿ ಕಾನೂನು- ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದ ರೌಡಿಯೋರ್ವನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಆದೇಶ ಹೊರಡಿಸಿದ್ದು, ಅದರಂತೆ ಪೊಲೀಸರು ಆರೋಪಿಯನ್ನು ಕಾಯ್ದೆಯಡಿ ಬಂಧಿಸಿ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿರುವ ಘಟನೆ ವರದಿಯಾಗಿದೆ. ಭದ್ರಾವತಿ ತಾಲೂಕು ಕವಲುಗುಂದಿ ಸಮೀಪದ ಭಂಡಾರಹಳ್ಳಿಯ ನಿವಾಸಿ ಬಾಲಕೃಷ್ಣ ಯಾನೆ ಬಾಲು ಯಾನೆ ಮಟನ್ ಬಾಲು (54) ಗೂಂಡಾ ಕಾಯ್ದೆಯಡಿ ಬಂಧಿಸಲಾದ ರೌಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಅವರು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದಾರೆ.
’ಬಾಲು ಮೇಲೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು. ತನ್ನ ಚಟುವಟಿಕೆ ಬದಲಾಯಿಸಿಕೊಳ್ಳುವಂತೆ ಹಲವು ಬಾರಿ ಪೊಲೀಸರು ಸೂಚಿಸಿದ್ದರು. ಆದಾಗ್ಯೂ ಆರೋಪಿಯು ತನ್ನ ಚಟುವಟಿಕೆ ನಿಲ್ಲಿಸದೆ ಮುಂದುವರಿಸಿಕೊಂಡು ಬಂದಿದ್ದು, ಭದ್ರಾವತಿ ನಗರದ ಜನರ ಮನಸ್ಸಿನಲ್ಲಿ ಅಪಾಯಕಾರಿ ವ್ಯಕ್ತಿಯಾಗಿ ಪರಿಣಮಿಸಿದ್ದ’ ಎಂದು ಎಸ್.ಪಿ. ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಪಾದಿತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಮಾ. 24 ರಂದು ಜಿಲ್ಲಾಧಿಕಾರಿ ಅನುಮತಿ ನೀಡಿದ್ದು, ಅದರಂತೆ ಪೊಲೀಸರು ಬಾಲುವನ್ನು ಬಂಧಿಸಿ ಕಲ್ಬುರ್ಗಿ ಜೈಲಿಗೆ ಕಳುಹಿಸಿದ್ದಾರೆ.
‘ಕಠಿಣ ಕ್ರಮ ನಿಶ್ಚಿತ’ ಜಿಲ್ಲೆಯ ಇತರ ಪೊಲೀಸ್ ಠಾಣಾ ಸರಹದ್ದು ಗಳಲ್ಲಿ ರೌಡಿಸಂ ಕೃತ್ಯ, ಸಮಾಜಘಾತುಕ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರ ಮೇಲೂ ಗೂಂಡಾ ಕಾಯ್ದೆ, ಗಡಿಪಾರು ಸೇರಿದಂತೆ ಇನ್ನಿತರ ಕಠಿಣ ಕಾಯ್ದೆಗಳಲ್ಲಿ ಕ್ರಮ ಜರಗಿಸಲು ಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಪತ್ರಿಕಾ ಪ್ರಕಟನೆೆಯಲ್ಲಿ ಮಾಹಿತಿ ನೀಡಿದ್ದಾರೆ.







