ನೂರ್ ಶ್ರೀಧರ್ ಜಾಮೀನು ರದ್ದತಿ ಪ್ರಯತ್ನ ಸರಿಯಲ್ಲ: ದೊರೆಸ್ವಾಮಿ
ಚಿಕ್ಕಮಗಳೂರು, ಮಾ.26: ನಕ್ಸಲ್ ಸಾಂಗತ್ಯ ತ್ಯಜಿಸಿ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿರುವ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‌ರ ಜಾಮೀನು ಆದೇಶವನ್ನು ರದ್ದುಗೊಳಿಸಲು ಚಿಕ್ಕಮಗಳೂರು ಪೊಲೀಸರು ನಡೆಸುತ್ತಿರುವ ಪ್ರಯತ್ನ ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ರವಿವಾರ ಹೇಳಿಕೆ ನೀಡಿದ್ದು, ನಕ್ಸಲರ ಕೂಟದಲ್ಲಿದ್ದು ಆನಂತರ ಅದನ್ನು ತೊರೆದು, ಸರಕಾರದ ಅನುಮತಿಯಿಂದ ಪ್ರಜಾಸತ್ತಾತ್ಮಕವಾಗಿ ಜನ ಸಾಮಾನ್ಯರ ಹಕ್ಕು ಬಾಧ್ಯತೆಗಳಿಗಾಗಿ ಜನ ಸಂಘಟನೆ ಮಾಡಲು ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಕರ್ನಾಟಕದಾದ್ಯಂತ ಸುತ್ತಾಡುತ್ತಿದ್ದಾರೆ. ಶ್ರೀಧರ್ ಕಾಣೆಯಾಗಿಲ್ಲ, ನಕ್ಸಲ್ ಚಟುವಟಿಕೆಗಳಲ್ಲಿ ಯೂ ತೊಡಗಿಲ್ಲ. ಬಡತನ ನಿವಾರಣೆಗಾಗಿ ಹೋರಾಡಲು ಕಂಕಣಬದ್ಧರಾಗಿರುವ ಸಂಘ ಸಂಸ್ಥೆಯ ನಾಯಕರನ್ನು ಗುರುತಿಸಿ ಅವರನ್ನೆಲ್ಲ ಸಮಾನತೆಗಾಗಿ ಜನಾಂದೋಲನ ಎಂಬ ಸಂಸ್ಥೆಯ ಮೂಲಕ ಸಂಘಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅದರಲ್ಲಿ ತಾನೂ ಸಕ್ರಿಯನಾಗಿದ್ದೇನೆ . ಕದ್ದುಮುಚ್ಚಿ ಯಾವ ಕಾರ್ಯಕ್ರಮಗಳನ್ನೂ ನಾವು ಮಾಡುತ್ತಿಲ್ಲ. ಸರಕಾರದ ಜೊತೆಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದೇವೆ. ಸರಕಾರ ಮತ್ತು ನಾವು ಬಡತನವನ್ನು ಹೊಡೆದೋಡಿಸುವ ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಿರುವ ಅವರು, ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಇನ್ನೂ ಬಡತನವನ್ನು ಅನುಭವಿಸುತ್ತಿರುವ ಭೂಹೀನ ರೈತರಿಗೆ, ಕಾರ್ಮಿಕರಿಗೆ, ದುಡಿಮೆಯ ಸಾಧನವಾದ ಭೂಮಿಯನ್ನು ಸರಕಾರದಿಂದ ಕೊಡಿಸುವ ಮಹತ್ಕಾರ್ಯದಲ್ಲಿ ಈಗ ತೊಡಗಿದ್ದೇವೆ ಎಂದು ಹೇಳಿದರು.
ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದೆ. ನೂರ್ ಶ್ರೀಧರ್ ಉತ್ತಮ ಕೆಲಸ ಮಾಡುತ್ತಿರುವಾಗ, ಕುಟುಂಬ ನೆಪ ಮುಂದಿಟ್ಟುಕೊಂಡು ಅವರ ಜಾಮೀನನ್ನು ರದ್ದುಗೊಳಿಸಬೇಕೆಂದು ಚಿಕ್ಕಮಗಳೂರು ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತಿದ್ದಾರೆ. ಸಿದ್ದರಾಮಯ್ಯನವರು ನಮ್ಮ ಈ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ನಮ್ಮ ಸಂಘಟನೆಗೂ ಇರುವ ಉತ್ತಮ ಸಂಬಂಧವನ್ನು ಕೆಲವು ಪೊಲೀಸ್ ಅಧಿಕಾರಿಗಳು ಸಹಿಸುವ ಮನಸ್ಥಿತಿಯಲ್ಲಿ ಇಲ್ಲ ಎಂಬುದು ಅವರ ವರ್ತನೆಯಿಂದ ವ್ಯಕ್ತವಾಗುತ್ತದೆ. ಪೊಲೀಸರ ಈ ಅಹಿತಕರ ಧೋರಣೆಯ ಕುರಿತು ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೂ ಪತ್ರ ಬರೆಯಲಾಗುವುದು. ಈ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಇರುವವರ ಮೇಲೆ ವಿನಾಕಾರಣ ಹಗೆತನ ಸಾಧಿಸುವ ಕೃತ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ತೊಡಗಬಾರದೆಂದು ಮನವಿ ಮಾಡಿದ್ದಾರೆ.







