ಭಡ್ತಿ ಮೀಸಲಾತಿ ಸಲ್ಲ
ಮಾನ್ಯರೆ,
ಭಡ್ತಿ ಮೀಸಲಾತಿಯ ಕುರಿತಂತೆ ತಮ್ಮ ಸಂಪಾದಕೀಯವನ್ನು ಓದಿದೆ. ಆದರೆ ಅದರ ಕುರಿತಂತೆ ನನಗೆ ಕೆಲವು ಆಕ್ಷೇಪಗಳಿವೆ. ಶಿಕ್ಷಣದಲ್ಲಿ ಮೀಸಲಾತಿ ಸರಿ. ಹಾಗೆಯೇ ಉದ್ಯೋಗಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲೂ ಮೀಸಲಾತಿ ಇರಲಿ. ಆದರೆ ಭಡ್ತಿಯ ಸಂದರ್ಭದಲ್ಲಿ ಮೀಸಲಾತಿ ಒಟ್ಟು ಕೌಶಲ್ಯದ ಮೇಲೆಯೇ ಅದು ದುಷ್ಪರಿಣಾಮವನ್ನು ಬೀರಲಿದೆ. ಉದ್ಯೋಗದಲ್ಲಿ ಕಳಪೆ ಅಭ್ಯರ್ಥಿಗಳು ಮೇಲಧಿಕಾರಿಗಳಾಗಿ ಸ್ಥಾನ ಪಡೆದಾಗ, ನುರಿತ ಸಿಬ್ಬಂದಿಗಳು, ದಕ್ಷವಾಗಿ ಕಾರ್ಯನಿರ್ವಹಿಸಿದವರಿಗೆ ಭ್ರಮನಿರಸನವಾಗಬಹುದು. ಹತಾಶೆಗೊಳ್ಳಬಹುದು. ಹಾಗೆಯೇ ಕಳಪೆ ಅಧಿಕಾರಿಯ ಕೈಕೆಳಗೆ ಪ್ರತಿಭಾವಂತ ಸಿಬ್ಬಂದಿ ಕೆಲಸ ಮಾಡುವಂತಹ ಸನ್ನಿವೇಶ ನಿರ್ಮಾಣವಾದರೆ ಅದು ಒಟ್ಟು ವ್ಯವಸ್ಥೆಯ ಮೇಲೆಯೇ ದುಷ್ಪರಿಣಾಮ ಬೀರುತ್ತದೆ.
ಹೌದು. ಭಡ್ತಿ ನೀಡುವ ಸಂದರ್ಭದಲ್ಲೂ ಕೆಲವೊಮ್ಮೆ ರಾಜಕೀಯ ನಡೆಯುತ್ತದೆ. ಅದಕ್ಕಾಗಿ ಭಡ್ತಿಗೆ ಕೆಲವು ಗಣಕೀಕೃತವಾದ ಮಾದರಿಗಳನ್ನು ಅನ್ವಯಿಸಬಹುದು. ಅವರ ಕೆಲಸ, ಶ್ರಮ ಇವೆಲ್ಲವನ್ನೂ ದಾಖಲಿಸುವಂತಹ ಒಂದು ಮಾರ್ಗಸೂಚಿಯನ್ನು ಕಂಡು ಹಿಡಿಯಬೇಕು. ಅತ್ಯುತ್ತಮವಾಗಿ ಕೆಲಸ ಮಾಡುವ ಯಾವ ಸಮುದಾಯದವನೇ ಆಗಲಿ, ಆತನಿಗಷ್ಟೇ ಭಡ್ತಿ ದೊರಕಬೇಕು. ಇಲ್ಲವಾದರೆ, ಕೆಲಸ ಮಾಡದೆ ಸೋಮಾರಿಗಳಾಗಿ ಕಾಲ ಕಳೆಯುವ ಸಿಬ್ಬಂದಿ ಹೆಚ್ಚಬಹುದು. ಶ್ರದ್ಧೆಯಿಂದ ಕೆಲಸ ಮಾಡುವವರೂ ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡದೇ ಇರುವಂತಹ ಸನ್ನಿವೇಶ ನಿರ್ಮಾಣವಾಗಬಹುದು.
ಆದುದರಿಂದ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸೋಣ. ಜೊತೆಗೆ ಭಡ್ತಿಯನ್ನು ಜಾತಿ ರಾಜಕೀಯದಿಂದ ಹೊರಗಿಟ್ಟು, ಅರ್ಹರಿಗಷ್ಟೇ ಅದು ದೊರಕುವಂತೆ ಮಾಡೋಣ. ಯಾವುದೇ ರಾಜಕೀಯ, ಜಾತೀಯ ಲಾಬಿಗಳು ಅದರಲ್ಲಿ ಹಸ್ತಕ್ಷೇಪ ಮಾಡದಂತೆ ಸೂಕ್ತ ತಂತ್ರಜ್ಞಾನ, ದಾಖಲೆಗಳ ಮೂಲಕ ವೈಜ್ಞಾನಿಕವಾಗಿ ಭಡ್ತಿಗಳನ್ನು ಹಂಚೋಣ.





