ಆಸ್ಟ್ರೇಲಿಯಾ: ಮತ್ತೊಬ್ಬ ಭಾರತೀಯನ ಮೇಲೆ ಜನಾಂಗೀಯ ನಿಂದನೆ, ಗಂಭೀರ ಹಲ್ಲೆ

ಮೆಲ್ಬೋರ್ನ್, ಮಾ.27: ಕೇರಳ ಮೂಲದ ಪಾದ್ರಿಯೊಬ್ಬರ ಮೇಲೆ ಜನಾಂಗೀಯ ನಿಂದನೆ ಹಾಗೂ ದಾಳಿ ನಡೆದ ಘಟನೆಯ ಬೆನ್ನಲ್ಲೇ ಮತ್ತೊಬ್ಬ ಭಾರತೀಯನ ಮೇಲೆ ಹದಿಹರೆಯದ ಯುವಕರ ತಂಡವೊಂದು ಜನಾಂಗೀಯ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ತಾಸ್ಮಾನಿಯಾದಲ್ಲಿ ಶನಿವಾರ ನಡೆದಿದೆ.
ಅರೆಕಾಲಿಕ ಚಾಲಕ ಲಿ ಮ್ಯಾಕ್ಸ್ ಜಾಯ್ ಎಂಬವರು ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯವರು. ಇವರು ಮೆಕ್ ಡೊನಾಲ್ಡ್‌ನಲ್ಲಿ ಕಾಫಿಗೆ ನಿಂತಿದ್ದಾಗ, ಐವರು ಅಲ್ಲಿನ ಕಾರ್ಮಿಕರ ಜತೆ ವಾಗ್ವಾದಕ್ಕೆ ಇಳಿದಿದ್ದರು. ಅದೇ ತಂಡ ಜಾಯ್ ಅವರ ಮೇಲೆ ದಾಳಿ ಮಾಡಿತು ಎನ್ನಲಾಗಿದೆ.
"ಸ್ಟೋರ್ ಮ್ಯಾನೇಜರ್ ಅವರನ್ನು ನಿಂದಿಸುತ್ತಾ ಬಂದ ಯುವಕನೊಬ್ಬ, ನನ್ನನ್ನು ನೋಡಿದ ತಕ್ಷಣ ನನ್ನ ವಿರುದ್ಧ ಗೊಣಗಲು ಆರಂಭಿಸಿದ. "ಯು ಬ್ಲ್ಯಾಕ್ ಇಂಡಿಯನ್" ಎಂದು ನಿಂದಿಸಿದ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ, ಆ ವ್ಯಕ್ತಿ ನನ್ನ ಮುಖದ ಮೇಲೆ ಬಲವಾಗಿ ಗುದ್ದಿದ. ಇತರರೂ ಸೇರಿಕೊಂಡು ಮನಸೋ ಇಚ್ಛೆ ಥಳಿಸಿದರು'' ಎಂದು ಜಾಯ್ ಘಟನೆಯನ್ನು ವಿವರಿಸಿದ್ದಾರೆ.
ಸುತ್ತಮುತ್ತಲು ನೋಡುತ್ತಿದ್ದ ಇತರರು ಪೊಲೀಸರಿಗೆ ಫೋನ್ ಮಾಡುವಷ್ಟರಲ್ಲಿ ಗುಂಪು ಅಲ್ಲಿಂದ ಪರಾರಿಯಾಗಿದೆ. ಆದರೆ ಮತ್ತೆ ವಾಪಸ್ಸಾಗಿ ಹಲ್ಲೆ ನಡೆಸಿತು ಎಂದು ದೂರಿದ್ದಾರೆ. ಗಾಯವಾಗಿ ರಕ್ತ ಸೋರುತ್ತಿದ್ದ ಜಾಯ್ ಅವರನ್ನು ರಾಯಲ್ ಹೊಬಾರ್ಟ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ. ಘಟನೆಯ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಜಾಯ್ ಆಗ್ರಹಿಸಿದ್ದಾರೆ. ಕೊಟ್ಟಾಯಂ ಸಂಸದ ಜೋಸ್ ಕೆ. ಮಣಿ ಘಟನೆಯನ್ನು ಖಂಡಿಸಿದ್ದು, ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚಿಸುವುದಾಗಿ ಭವರಸೆ ನೀಡಿದ್ದಾರೆ.







