ಬಿಜೆಪಿ ಮೇಯರ್‌ನಿಂದಲೇ ವಾಟ್ಸ್ ಆ್ಯಪ್‌ನಲ್ಲಿ ಹೋಟೆಲ್ ವಿರುದ್ಧ ಬೀಫ್ ಮಾರಾಟದ ಸುಳ್ಳಾರೋಪ!

ಜೈಪುರ, ಮಾ.27: ನಗರದ ಹೋಟೆಲ್ ಒಂದರಲ್ಲಿ ಬೀಫ್ ಖಾದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಮೇಯರ್ ವಾಟ್ಸ್ ಆ್ಯಪ್‌ನಲ್ಲಿ ಸುಳ್ಳು ಸಂದೇಶ ರವಾನಿಸಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮುಖಂಡನ ದೂರಿನ ಮೇರೆಗೆ ಪೊಲೀಸರು ಹೋಟೆಲ್ ಮಾಲಕ ಹಾಗೂ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದನ್ನು ಮಾನವ ಹಕ್ಕು ಹೋರಾಟಗಾರರು ಕಟುವಾಗಿ ಟೀಕಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಗೋ ರಕ್ಷಕ ದಳದ ಅಧ್ಯಕ್ಷೆ ಕಮಲ್ ದೀದಿ ನೇತೃತ್ವದ ಕೆಲ ಗೋರಕ್ಷಕರು ಅಸ್ವಸ್ಥ ಹಾಗೂ ಬೀಡಾಡಿ ದನಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಇಬ್ಬರು ಯುವಕರು ತ್ಯಾಜ್ಯ ಎಸೆಯುವುದನ್ನು ನೋಡಿದರು. ಇದು ಗೋಮಾಂಸದ ತ್ಯಾಜ್ಯ ಇರಬೇಕು ಎಂದು ಅವರು ಶಂಕಿಸಿದರು. ಹಯಾತ್ ರಬ್ಬಾನಿ ಹೋಟೆಲ್‌ನಲ್ಲಿ ವಾರಾಂತ್ಯದಲ್ಲಿ ಗೋಮಾಂಸ ಖಾದ್ಯಗಳನ್ನು ತಯಾರಿಸಿ ನೀಡಲಾಗುತ್ತಿದೆ ಎಂಬ ದೂರುಗಳೂ ಬಂದಿವೆ ಎಂದು ಅವರು ಹೇಳಿದ್ದಾರೆ. ಆದರೆ ಹೋಟೆಲ್ ಮಾಲಕ ನಯೀಮ್ ರಬ್ಬಾನಿ ಇದನ್ನು ನಿರಾಕರಿಸಿದ್ದಾರೆ.
ಅಲ್ಲಿನ ಆಹಾರ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮಾರ್ಚ್ 19ರಂದು ರಾತ್ರಿ ದೀದಿ ನೇತೃತ್ವದ ತಂಡ ಹೋಟೆಲ್ ಮೇಲೆ ದಾಳಿ ಮಾಡಿ, ಪೊಲೀಸರ ಸಮ್ಮುಖದಲ್ಲೇ ಸಿಬ್ಬಂದಿಯನ್ನು ಥಳಿಸಿದರು ಎನ್ನಲಾಗಿದೆ. ಇಲ್ಲಿ ಗೋಮಾಂಸ ಸರಬರಾಜು ಮಾಡುವುದು ಮಾತ್ರವಲ್ಲದೇ ತ್ಯಾಜ್ಯಗಳನ್ನು ಹಸುಗಳಿಗೆ ತಿನ್ನಿಸಲಾಗುತ್ತಿದೆ ಎಂದು ದೀದಿ ಆಪಾದಿಸಿದ್ದಾರೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆ ಕಾರ್ಯಕರ್ತರು ಘಟನೆ ಬಗ್ಗೆ ತಕ್ಷಣ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಜೈಪುರ ಮೇಯರ್ ಅಶೋಕ್ ಲಹೋಟಿ, ಮಾಂಸದ ತ್ಯಾಜ್ಯವನ್ನು ಯಾವುದೇ ಪುರಾವೆ ಇಲ್ಲದೇ ಗೋಮಾಂಸ ಎಂದು ಬಿಂಬಿಸುವ ಸಂದೇಶವನ್ನು ರವಾನಿಸಿದ್ದಾರೆ ಎನ್ನುವುದನ್ನೂ ಗಮನಕ್ಕೆ ತಂದರು. ರಾಜಕೀಯ ಒತ್ತಡದಿಂದ ಪೊಲೀಸರು, ಹೋಟೆಲ್ ಮಾಲಕ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನುವುದು ಪಿಯುಸಿಎಲ್ ಆರೋಪ.
ಈ ದಾಂಧಲೆ ಎಬ್ಬಿಸಿದ ಗುಂಪಿನ ವಿರುದ್ಧ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪಿಯುಸಿಎಲ್ ಆಪಾದಿಸಿದೆ. ದೀದಿಯನ್ನು ತಕ್ಷಣ ಬಂಧಿಸಬೇಕು ಹಾಗೂ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು; ಸುಳ್ಳು ಸಂದೇಶ ರವಾನಿಸಿದ ಲಹೋಟಿ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ.







