ವಿಮಾನದಲ್ಲೇ ’ಷೋ’: ಕಪಿಲ್ ಶರ್ಮ ತರಾಟೆಗೆ ಮುಂದಾದ ಏರ್ ಇಂಡಿಯಾ

ಹೊಸದಿಲ್ಲಿ, ಮಾ.27: ವಿಮಾನ ಯಾನದ ವೇಳೆ ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಏರ್ ಇಂಡಿಯಾ ಮುಂದಾಗಿದ್ದು, ಆಸ್ಟ್ರೇಲಿಯಾದಿಂದ ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿ ಭಾರಿ ಗದ್ದಲ ಎಬ್ಬಿಸಿದ ಆರೋಪದಲ್ಲಿ ಟಿವಿ ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ ಎಚ್ಚರಿಕೆ ನೀಡಲು ನಿರ್ಧರಿಸಿದೆ.
ಈ ಸ್ಟಾರ್ ಹಾಸ್ಯನಟ ವಿಮಾನದಲ್ಲಿ ಯಾವ ರೀತಿ ವರ್ತಿಸಿದ್ದಾರೆ ಎಂಬ ಬಗ್ಗೆ ವರದಿ ನೀಡುವಂತೆ ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೊಹಾನಿ ಸೂಚಿಸಿದ್ದಾರೆ. ಈ ವರದಿ ಪಡೆದ ಬಳಿಕ ಈ ವಾರದಲ್ಲೇ ಅವರಿಗೆ ಎಚ್ಚರಿಕೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಮೆಲ್ಬೋರ್ನ್- ದಿಲ್ಲಿ ವಿಮಾನದಲ್ಲಿ (ಎಐ-309) ಕಪಿಲ್ ಶರ್ಮಾ ತಮ್ಮ ತಂಡದ ಜತೆ ಬಿಸಿನೆಸ್ ಕ್ಲಾಸ್‌ನಲ್ಲಿ ಮಾರ್ಚ್ 16ರಂದು ಪ್ರಯಾಣಿಸುತ್ತಿದ್ದರು. ಶರ್ಮಾ ಈ ಸಂದರ್ಭ ಪಾನಮತ್ತರಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ತಮ್ಮ ತಂಡದ ಜತೆಗೆ ದೊಡ್ಡ ಧ್ವನಿಯಿಂದ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ.
ಘಟನೆಯಿಂದ ಎಕಾನಮಿ ಕ್ಲಾಸ್‌ನಲ್ಲಿದ್ದ ಪ್ರಯಾಣಿಕರು ಅದೇನು ಎಂಬ ಕುತೂಹಲದಿಂದ ನೋಡತೊಡಗಿದರು ಹಾಗೂ ಕೆಲವರಿಗೆ ಭೀತಿಯೂ ಆಯಿತು. ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಈ ಸಂದರ್ಭ ವಿಮಾನ ಸಿಬ್ಬಂದಿ ಕಪಿಲ್‌ಗೆ ಮನವಿ ಮಾಡಿದರು. ಆಗ ಕ್ಷಮೆ ಯಾಚಿಸಿದ ಕಪಿಲ್ ಶರ್ಮಾ, ತಮ್ಮ ಆಸನಕ್ಕೆ ಮರಳಿದರು. ಆದರೆ ಮತ್ತೆ ಸ್ವಲ್ಪ ಸಮಯದ ಬಳಿಕ ಅದೇ ಚಾಳಿ ಮುಂದುವರಿಸಿದಾಗ ಪೈಲಟ್ ಎದ್ದು ಬಂದು ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ. ಬಳಿಕ ಕಪಿಲ್ ನಿದ್ದೆಗೆ ಜಾರಿದರು ಎನ್ನಲಾಗಿದೆ.







