ಅಂತಿಮ ಟೆಸ್ಟ್: ಜಡೇಜ ಅರ್ಧಶತಕ , ಭಾರತಕ್ಕೆ 32 ರನ್ ಮುನ್ನಡೆ

ಧರ್ಮಶಾಲಾ, ಮಾ.27: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 32 ರನ್‌ಗಳ ಮುನ್ನಡೆ ಸಾಧಿಸಿದೆ.
ಎರಡನೆ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 91 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 248ರನ್ ಗಳಿಸಿದ್ದ ಭಾರತ ಮೂರನೆ ದಿನದ ಆಟ ಮುಂದುವರಿಸಿ 118.1 ಓವರ್ ಗಳಲ್ಲಿ 332 ರನ್ ಗಳಿಗೆ ಆಲೌಟಾಗಿದೆ.
ರವೀಂದ್ರ ಜಡೇಜ (63) ತನ್ನ 30ನೆ ಟೆಸ್ಟ್ ನಲ್ಲಿ 7ನೆ ಅರ್ಧಶತಕ ದಾಖಲಿಸಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 31 ರನ್, ಭುವನೇಶ್ವರ ಕುಮಾರ್ 0, ಕುಲದೀಪ್ ಯಾದವ್ 7 ರನ್ ಗಳಿಸಿ ಔಟಾದರು. ಉಮೇಶ್ ಯಾದವ್ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಆಲ್ ರೌಂಡರ್ ರವೀಂದ್ರ ಜಡೇಜ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಏಳನೆ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆಸ್ಟ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 88.3 ಓವರ್ ಗಳಲ್ಲಿ 300 ರನ್ ಗಳಿಗೆ ಆಲೌಟಾಗಿತ್ತು.
ಆಸ್ಟ್ರೇಲಿಯದ ಲಿಯೊನ್ 92ಕ್ಕೆ5, ಕಮಿನ್ಸ್ 94ಕ್ಕೆ 3, ಹೇಝಲ್‌ವುಡ್ 51ಕ್ಕೆ 1 ಮತ್ತು ಓ’ಕೀಫೆ 75ಕ್ಕೆ 1ವಿಕೆಟ್ ಪಡೆದರು.





