ಕೇರಳದಲ್ಲೂ 10ನೆ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ

ತಿರುವನಂತಪುರಂ, ಮಾ. 27: ಕೇರಳದಲ್ಲಿ ಎಸೆಸೆಲ್ಸಿ ಗಣಿತ ಪ್ರಶ್ನೆ ಪತ್ರಿಕೆ ತಯಾರಿಸುವವರ ಹೆಸರನ್ನು ಸೋರಿಕೆ ಮಾಡಿ ಅವರ ಸಹಾಯದಿಂದ ಮಾದರಿಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಖಾಸಗಿ ಟ್ಯೂಶನ್ ಕೇಂದ್ರಗಳಿಗೆ ವಿತರಿಸುವ ಮೂಲಕ ಲಕ್ಷಾಂತರ ರೂಪಾಯಿ ಅಕ್ರಮ ನಡೆಸುವ ನಡೆಸುವ ಮಾಫಿಯಾ ಕಾರ್ಯಾಚರಿಸುತ್ತಿದೆ. ಈಸಲದ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆ ಯ ಮಾರ್ಚ್ 20ರಂದು ನಡೆದಿದ್ದ ಗಣಿತದ ಪರೀಕ್ಷೆಯ ಪ್ರಶ್ನೆಗಳಲ್ಲಿ 13 ಪ್ರಶ್ನೆಗಳು ಮೊದಲೇ ಸೋರಿಕೆ ಆಗಿತ್ತು. ಇದು ಪತ್ತೆಯಾದದ್ದರಿಂದ ಗಣಿತ ವಿಷಯದಲ್ಲಿ ಮಾರ್ಚ್ ಮೂವತ್ತಕ್ಕೆ ಮರು ಪರೀಕ್ಷೆ ನಡೆಸಲು ಸರಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಗೆ ಪ್ರಶ್ನಾಪತ್ರಿಕೆ ಅಕ್ರಮದ ಕುರಿತು ತನಿಖೆ ನಡೆಸಲು ನಿರ್ದೇಶಿಸಿದೆ. ಕೇರಳದಲ್ಲಿ ಮಾರ್ಚ್ 20ರಂದು ನಡೆದಿದ್ದ ಎಸೆಸೆಲ್ಸಿ ಗಣಿತ ಪರೀಕ್ಷೆಯ ಪ್ರಶ್ನೆಗಳಿಗೂ, ಮಲಪ್ಪುರಂ ಅರಿಕ್ಕೋಟ್ ಖಾಸಗಿ ಸಂಸ್ಥೆಯೂ ನೀಡಿದ್ದ ಪ್ರಶ್ನೆಪತ್ರಿಕೆಗೂ ಸಾಮ್ಯತೆ ಇರುವುದು ಕಂಡು ಬಂದಿತ್ತು. ಈ ಮೂಲಕ ಖಾಸಗಿ ಮಾಫಿಯಾಗಳು ಪ್ರಶ್ನೆ ಪೇಪರ್ ತಯಾರಿಸುವವರೊಂದಿಗೆ ಸಂಪರ್ಕ ಸಾಧಿಸಿ ಪಬ್ಲಿಕ್ ಪರೀಕ್ಷೆ ಹೋಲುವ ಪ್ರಶ್ನೆ ಪತ್ರಿಕೆಗಳನ್ನು ಖಾಸಗಿ ಟ್ಯೂಶನ್ ಕೇಂದ್ರಗಳಿಗೆ ವಿತರಿಸಿ ಹಣ ಮಾಡುತ್ತಿರುವುದು ಬಯಲಾಗಿದೆ. ಕೇರಳದ ಎಸ್‌ಸಿಇಆರ್‌ಟಿ( ದ. ಸ್ಟೇಟ್ ಕೌನ್ಸಿಲ್, ಎಜುಕೇಶನಲ್ ರೀಸರ್ಚ್ ಆಂಡ್ ಟ್ರೈನಿಂಗ್), ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶನಾಲಯ, ಪರೀಕ್ಷಾ ಭವನ್ ಕೇಂದ್ರೀಕರಿಸಿ ಖಾಸಗಿ ಮಾಫಿಯಾ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸುವ ಅಕ್ರಮವ್ಯವಹಾರ ನಡೆಸುತ್ತಿರುವುದು ಇದೀಗ ಬಹಿರಂಗವಾಗಿದೆ. ಮೇಲಿನ ಮೂರು ಕಚೇರಿಗಳಲ್ಲಿ ಖಾಸಗಿ ಏಜೆನ್ಸಿಗಳು ಸಂಪರ್ಕ ಸಾಧಿಸುತ್ತಿವೆ ಮತ್ತು ಅಲ್ಲಿ ಅವರಿಗೆ ನೆರವಾಗಲು ಜನರಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಖಾಸಗಿ ಟ್ಯೂಶನ್ ಕೇಂದ್ರಗಳು ನಡೆಸಿದ ಮಾದರಿ ಪ್ರಶ್ನೆ ಪತ್ರಿಕೆಯ 13 ಪ್ರಶ್ನೆಗಳು ಒಂದೇ ರೀತಿ ಇದ್ದುದರಿಂದ ಈ ಕುರಿತು ತನಿಖೆಗೆ ಸರಕಾರ ಸಾರ್ವಜನಿಕ ವಿದ್ಯಾಭ್ಯಾಸ ಕಾರ್ಯದರ್ಶಿ ಉಷಾ ಟೈಟ್ಸ್‌ರಿಗೆ ವಹಿಸಿಕೊಟ್ಟಿದೆ. ಅವರ ವರದಿಯ ನಂತರ ಹೆಚ್ಚಿನ ಕ್ರಮಕೈಗೊಳ್ಳಲಾಗುವುದೆಂದು ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಈಗಾಗಲೇ ಹೇಳಿದ್ದಾರೆ. ಕೇರಳದಲ್ಲಿ ಎಸ್‌ಸಿಇಆರ್‌ಟಿ ಎಸೆಸೆಲ್ಸಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸುವವರ ಪ್ಯಾನೆಲ್‌ನ್ನು ಕೆಲವು ವರ್ಷಗಳಿಂದ ರೂಪಿಸುತ್ತಾ ಬಂದಿದೆ. ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಗೆ ಮುಂಚೆ ಪ್ರಶ್ನೆ ಪೇಪರ್ ಮಾಫಿಯಾ ಎಸ್‌ಸಿಇಆರ್‌ಟಿಗೆ ಬಂದು ಅಲ್ಲಿ ಈ ಸಲ ಪ್ರಶ್ನೆ ಪತ್ರಿಕೆ ಮಾಡುವವರು ಯಾರೆಂದು ತಿಳಿದು ಕೊಳ್ಳುತ್ತದೆ. ಆ ನಂತರ ಪ್ರಶ್ನೆಪತ್ರಿಕೆ ತಯಾರಿಸುವವರೊಂದಿಗೆ ಸಂಪರ್ಕ ಬೆಳೆಸಿ ಇವರಿಗೆ ಭಾರೀಮೊತ್ತದ ಆಮಿಷ ಒಡ್ಡಿ ಏಜೆನ್ಸಿಗಳು ತಮಗೆ ಪ್ರಶ್ನೆ ಪತ್ರಿಕೆ ತಯಾರಿಸಿಕೊಡುವಂತೆ ಮಾಡುತ್ತಾರೆ. ಇವರಿಂದ ಒಂದಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆ ತಯಾರಿಸಿ ಪಡೆದುಕೊಂಡು ಕೇರಳದಾದ್ಯಂತ ವಿವಿಧ ಖಾಸಗಿ ಟ್ಯೂಶನ್ ಕೇಂದ್ರಗಳಿಗೆ, ಅನುದಾನ ರಹಿತ ಶಾಲೆಗಳಿಗೆ ಈ ಏಜೆನ್ಸಿಗಳು ತಲುಪಿಸಿಕೊಡುತ್ತವೆ. ಈ ಖಾಸಗಿ ಟ್ಯೂಶನ್ ಕೇಂದ್ರಗಳು ಇವರು ತಲುಪಿಸಿಕೊಡುವ ಪ್ರಶ್ನೆಪತ್ರಿಕೆಯನ್ನುಉಪಯೋಗಿಸಿ ಪಬ್ಲಿಕ್ ಪರೀಕ್ಷೆಗಿಂತ ಮುಂಚೆ ವಿಶೇಷ ಮಾದರಿ ಪರೀಕ್ಷೆ ನಡೆಸಿ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತವೆ.
ಜನವರಿಯಿಂದಲೆ ಈ ರೀತಿಯಲ್ಲಿ ಟ್ಯೂಶನ್ ಸೆಂಟರ್‌ಗಳು ಪರೀಕ್ಷೆ ನಡೆಸುತ್ತವೆ. ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಗೆ ಮೊದಲು ಇವರು ತಮ್ಮ ಸಂಸ್ಥೆಗಳಲ್ಲಿ ಪೂರ್ವ ಮಾದರಿ ಪರೀಕ್ಷೆಯನ್ನು ನಡೆಸುತ್ತಿದ್ದು, ಇದರ ಪ್ರಶ್ನೆಗಳು ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯ ಪ್ರಶ್ನೆಗಳಿಗೆ ಹೋಲುವಂತಿರುತ್ತದೆ. ಇದರ ಹೆಸರಿನಲ್ಲಿ ಟ್ಯೂಶನ್ ಸೆಂಟರ್‌ಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ , ಆಟ್ಟಿಂಗಲ್‌ನಲ್ಲಿ ಕಿಳಿಮಾನೂರಿನಲ್ಲಿ ಈ ರೀತಿಯ ಪ್ರಶ್ನೆಪತ್ರಿಕೆಗಳನ್ನು ತಯಾರಿಸುವ ಮಾಫಿಯಾಗಳು ಕಾರ್ಯಾಚರಿಸುತ್ತಿವೆ ಎಂದುಕೇರಳ ಸಾರ್ವಜನಿಕ ವಿದ್ಯಾಭ್ಯಾಸ ಮಂಡಳಿಗೆ ಮಾಹಿತಿ ದೊರಕಿದೆ. ಆಟ್ಟಿಂಗಲ್‌ನ ಏಜೆನ್ಸಿ ಒಂದುಪ್ರಕಟನೆಯ ನೆಪದಲ್ಲಿ ಎಸ್‌ಸಿಇ ಆರ್‌ಟಿಯೊಂದಿಗೆ ಸಂಬಂಧ ಸ್ಥಾಪಿಸಿತ್ತು. ಇವರು ಕೇರಳದ ಇತರೆಲ್ಲ ಕಡೆಗಳ ಟ್ಯೂಷನ್ ಸೆಂಟರ್‌ಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿಕೊಡುತ್ತಿದ್ದಾರೆಂದು ವಿದ್ಯಾಭ್ಯಾಸ ಮಂಡಳಿಗೆ ಮಾಹಿತಿ ಸಿಕ್ಕಿದೆ. ಶೇಕಡವಾರು ತೇರ್ಗಡೆಯನ್ನು ಹೆಚ್ಚಿಸುವುದಕ್ಕಾಗಿ ಸರಕಾರಿ, ಅನುದಾನಿತ ಶಾಲೆಗಳವರೆಗೂ ಖಾಸಗಿ ಏಜೆನ್ಸಿಗಳು ತಂದುಕೊಡುವ ಪ್ರಶ್ನೆ ಪತ್ರಿಕೆಯ ಆಧಾರದಲ್ಲಿ ಮಾದರಿ ಪರೀಕ್ಷೆಯನ್ನು ನಡೆಸುತ್ತಿವೆ. ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೂ ತಮ್ಮ ಪ್ರಶ್ನೆ ಪತ್ರಿಕೆಗೂ ಹೋಲಿಕೆ ಇರುವುದನ್ನು ತೋರಿಸಿ ಏಜೆನ್ಸಿಗಳು ತಮ್ಮಮಾರ್ಕೆಟನ್ನು ಅಂದರೆ ಖಾಸಗಿ ಟ್ಯೂಶನ್ ಕೇಂದ್ರಗಳನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರಶ್ನೆ ಪತ್ರಿಕೆ ತಯಾರಿಸುವವರ ಹೆಸರು ಮತ್ತು ವಿವರಗಳು ಕೆಲವು ವರ್ಷಗಳಿಂದೀಚೆಗೆ ಎಸ್‌ಸಿಆರ್.ಟಿಯಿಂದ ಹೊರಗೆ ಹೋಗುತ್ತಿವೆ ಎಂದು ಹೇಳಲಾಗುತ್ತಿದೆ.







