“ಮುಸ್ಲಿಮರಿಗೆ ನೀಡಲಾಗುವ ಎಲ್ಲಾ ಸಬ್ಸಿಡಿಗಳನ್ನು ನಿಲ್ಲಿಸಿ, ಇಲ್ಲವೇ ಹಿಂದೂಗಳಿಗೂ ಒದಗಿಸಿ” : ತೊಗಾಡಿಯಾ

ಅಹ್ಮದಾಬಾದ್,ಮಾ.27 : ಹಿಂದೂ ತೆರಿಗೆದಾರರ ಹಣದಿಂದ ಮುಸ್ಲಿಮರಿಗೆ ನೀಡಲಾಗುವ ಎಲ್ಲಾ ಸಬ್ಸಿಡಿಗಳನ್ನು ಸರಕಾರ ನಿಲ್ಲಿಸಬೇಕು ಇಲ್ಲವೇ ಅಂತಹುದೇ ಸಬ್ಸಿಡಿಗಳನ್ನು ಹಿಂದೂಗಳಿಗೂ ಒದಗಿಸಬೇಕು, ಎಂದು ವಿಶ್ವ ಹಿಂದು ಪರಿಷದ್ ನಾಯಕ ಪ್ರವೀಣ್ ತೊಗಾಡಿಯಾ ಆಗ್ರಹಿಸಿದ್ದಾರೆ.
ಇಲ್ಲಿನ ಜಿಎಂಡಿಸಿ ಮೈದಾನದಲ್ಲಿ ಆಯೋಜಿಸಲಾದ ಹಿಂದೂ ಸಮ್ಮೇಳನವೊಂದರಲ್ಲಿ ಮಾತನಾಡಿದ ತೊಗಾಡಿಯಾ ‘‘ಹಿಂದೂಗಳಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣದಿಂದ ಮುಸ್ಲಿಮರಿಗೆ ಸಹಾಯ ಮಾಡುವುದಾದರೆ, ಅದೇ ಹಣದಿಂದ ಪಟೇಲರು, ಠಾಕೂರರು ಹಾಗೂ ಕೊಲಿ ಸಮುದಾಯದವರಿಗೆ ಸಹಾಯ ಮಾಡಬಾರದೇಕೆ?’’ ಎಂದು ಪ್ರಶ್ನಿಸಿದರು.
ಮುಸ್ಲಿಮರಿಗೆ ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳಲು ಹಾಗೂ ಶಿಕ್ಷಣಕ್ಕಾಗಿ ಧನಸಹಾಯ ಹಾಗೂ ಸಬ್ಸಿಡಿಗಳನ್ನು ಒದಗಿಸಲಾಗುತ್ತಿದ್ದರೆ, ಹಿಂದೂಗಳಿಗೆ ಅಂತಹ ಸೌಲಭ್ಯವಿಲ್ಲ ಎಂದು ಅವರು ಹೇಳಿದರು.
ಅಯ್ಯೋಧ್ಯೆಯಲ್ಲಿ ಹಿಂದೂ ದೇವಳವನ್ನು ನಿರ್ಮಿಸಲಾಗುವುದು ಎಂದು ಹೇಳಿದ ತೊಗಾಡಿಯಾ ನೆರೆದಿದ್ದ ಸಭಿಕರಿಗೆ ‘‘ಅಯ್ಯೋಧ್ಯ ಜಾಯೇಂಗೆ, ಮಂದಿರ್ ವಹೀ ಬನಾಯೇಂಗೆ’’ ಎಂಬ ಘೋಷಣೆ ಕೂಗಲು ಉತ್ತೇಜಿಸಿದರು. ‘‘ಸರ್ದಾರ್ ವಲ್ಲಭಭಾಯಿ ಸೋಮನಾಥ ದೇವಳದ ನಿರ್ಮಾಣದ ಉಸ್ತುವಾರಿ ನೋಡಿಕೊಂಡಂತೆ ರಾಮ ಮಂದಿರವೂ ನಿರ್ಮಾಣವಾಗುವುದು,’’ ಎಂದು ಅವರು ಹೇಳಿದರು.
‘ಏಕ್ ಮುಟ್ಟಿ ಅನಾಜ್’ ಎಂಬ ಯೋಜನೆಯನ್ನು ವಿಹಿಂಪ ಜಾರಿಗೊಳಿಸುವುದು ಹಾಗೂ ಈ ಯೋಜನೆಯನ್ವಯ ಧವಸ ಧಾನ್ಯಗಳನ್ನು ಜನರಿಂದ ಸಂಗ್ರಹಿಸಿ ಅಗತ್ಯವಿರುವ ಹಿಂದೂಗಳಿಗೆ ವಿತರಿಸಲಾಗುವುದು ಎಂದು ತೊಗಾಡಿಯಾ ಹೇಳಿದರು.
ಯುವಜನರಗೆ ಮಾಸಿಕ ರೂ 8000ದಿಂದ ರೂ 20,000 ಆದಾಯ ತರಬಲ್ಲ ಉದ್ಯೋಗಗಳನ್ನು ತಂದುಕೊಡುವ ನಿಟ್ಟಿನಲ್ಲಿ ತರಬೇತಿ ನೀಡುವ ಯೋಜನೆಯೊಂದನ್ನು ಪ್ರಥಮ ಹಂತದಲ್ಲಿ ಅಹ್ಮದಾಬಾದ್ ನಗರದಲ್ಲಿ ಜಾರಿಗೊಳಿಸಲಾಗುವುದು ಎಂದೂ ತೊಗಾಡಿಯಾ ಮಾಹಿತಿ ನೀಡಿದರು.







