ಅಮೆರಿಕದ 15 ಕಂಪೆನಿಗಳ ವಿರುದ್ಧ ಇರಾನ್ ದಿಗ್ಬಂಧನ
ಮುಯ್ಯಿಗೆ ಮುಯ್ಯಿ!
.jpg)
ಟೆಹರಾನ್, ಮಾ. 27: ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವ ಹಾಗೂ ಇಸ್ರೇಲ್‌ಗೆ ಸಹಕಾರ ನೀಡುತ್ತಿರುವ ಅಮೆರಿಕದ 15 ಕಂಪೆನಿಗಳ ವಿರುದ್ಧ ಇರಾನ್ ದಿಗ್ಬಂಧನ ವಿಧಿಸಿದೆ ಎಂದು ಇರಾನ್‌ನ ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ರವಿವಾರ ವರದಿ ಮಾಡಿದೆ.
ಇದು ಈ ಹಿಂದೆ ಅಮೆರಿಕ ಇರಾನ್ ಕಂಪೆನಿಗಳ ವಿರುದ್ಧ ಹೇರಿದ್ದ ದಿಗ್ಬಂಧನಕ್ಕೆ ಪ್ರತೀಕಾರವೆಂದು ಪರಿಗಣಿಸಲಾಗಿದೆ.
ಈ ಕಂಪೆನಿಗಳು ‘ಮಾನವಹಕ್ಕು ಉಲ್ಲಂಘನೆ’ ಕೃತ್ಯಗಳಲ್ಲಿ ತೊಡಗಿವೆ ಹಾಗೂ ಫೆಲೆಸ್ತೀನ್ ವಿರುದ್ಧದ ಇಸ್ರೇಲ್‌ನ ‘ಭಯೋತ್ಪಾದನೆ’ ಕೃತ್ಯಗಳಲ್ಲಿ ಹಾಗೂ ಯಹೂದಿ ಬಡಾವಣೆಗಳ ನಿರ್ಮಾಣದಲ್ಲಿ ಸಹಕಾರ ನೀಡಿವೆ ಎಂದು ಇರಾನ್ ವಿದೇಶಿ ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಿಗ್ಬಂಧಿತ ಕಂಪೆನಿಗಳ ಪಟ್ಟಿಯಲ್ಲಿ ರಕ್ಷಣಾ ತಂತ್ರಜ್ಞಾನ ಸಂಸ್ಥೆ ರೇತಿಯಾನ್, ಐಟಿಟಿ ಕಾರ್ಪೊರೇಶನ್, ಯುನೈಟೆಡ್ ಟೆಕ್ನಾಲಜೀಸ್, ಓಶ್‌ಕೋಶ್ ಕಾರ್ಪ್ ಮುಂತಾದುವುಗಳು ಸೇರಿವೆ.
ಆದರೆ, ಈ ಪೈಕಿ ಯಾವುದಾದರೂ ಕಂಪೆನಿ ಇರಾನ್‌ನೊಂದಿಗೆ ವ್ಯವಹಾರ ಹೊಂದಿದೆಯೇ ಅಥವಾ ದಿಗ್ಬಂಧನ ಅವುಗಳ ಮೇಲೆ ಯಾವುದಾದರೂ ಪರಿಣಾಮ ಬೀರುತ್ತದೆಯೇ ಎನ್ನುವುದು ತಿಳಿದಿಲ್ಲ.





