ರೈತರ ಆತ್ಮಹತ್ಯೆ ಸಮಸ್ಯೆ ನಿರ್ವಹಣೆಗೆ ಸೂಕ್ತ ಕಾರ್ಯವಿಧಾನ ರೂಪಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಮಾ.27: ರೈತರ ಆತ್ಮಹತ್ಯೆಯಂತಹ ಗಂಭೀರ ಪ್ರಕರಣವನ್ನು ನಿಭಾಯಿಸಲು ರಾಜ್ಯ ಸರಕಾರಗಳು ಕೈಗೊಳ್ಳಬೇಕಾದ ಕ್ರಮವಿಧಾನದ ಬಗ್ಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಇದೊಂದು ಗಂಭೀರ ವಿಷಯವಾಗಿದೆ. ಇದನ್ನು ನಿಭಾಯಿಸಲು ರಾಜ್ಯ ಸರಕಾರಗಳು ಕೈಗೊಳ್ಳಬೇಕಾದ ಕ್ರಮವಿಧಾನಗಳ ಬಗ್ಗೆ ನಾಲ್ಕು ವಾರದೊಳಗೆ ಕೇಂದ್ರ ಸರಕಾರ ಮಾಹಿತಿ ನೀಡಬೇಕು ಎಂದು ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ನ್ಯಾಯಪೀಠವೊಂದು ತಿಳಿಸಿದೆ. ರೈತರು ಈ ರೀತಿಯ ನಿರ್ಧಾರ ಕೈಗೊಳ್ಳಲು ಇರುವ ಮೂಲ ಕಾರಣ ಮತ್ತು ಸಮಸ್ಯೆಯನ್ನು ನಿಭಾಯಿಸಲು ಸೂಕ್ತವಾದ ಕಾರ್ಯನೀತಿಯನ್ನು ಕೇಂದ್ರ ಸರಕಾರ ರೂಪಿಸಬೇಕು ಎಂದು ನ್ಯಾಯಪೀಠ ತಿಳಿಸಿತು.
ರೈತರಿಂದ ಆಹಾರ ಉತ್ಪನ್ನಗಳ ನೇರ ಖರೀದಿ, ವಿಮೆ ರಕ್ಷಣೆಯ ವಿಸ್ತರಣೆ, ಸಾಲ ಒದಗಿಸುವುದು, ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು.. ಹೀಗೆ ಸರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ತಿಳಿಸಿದರು. ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಿಭಾಯಿಸಲು ಸರಕಾರ ಒಂದು ಸಮಗ್ರ ನೀತಿಯನ್ನು ರೂಪಿಸಲಿದೆ ಎಂದವರು ತಿಳಿಸಿದರು.
ಕೃಷಿಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳೊಂದಿಗೆ ಸಮನ್ವಯ ಸಾಧಿಸಿ ಒಂದು ಕಾರ್ಯವಿಧಾನ ರೂಪಿಸಬೇಕು ಎಂದು ನ್ಯಾಯಪೀಠ ಕೇಂದ್ರ ಸರಕಾರಕ್ಕೆ ತಿಳಿಸಿತು.
3000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಕಾರ್ಯನೀತಿಯೊಂದನ್ನು ರೂಪಿಸಬೇಕು ಎಂದು ‘ಸಿಟಿಜನ್ಸ್ ರಿಸೋರ್ಸ್ ಆ್ಯಂಡ್ ಆ್ಯಕ್ಷನ್ ಆ್ಯಂಡ್ ಇನೀಷಿಯೇಟಿವ್’ ಎಂಬ ಎನ್‌ಜಿಒ ಸಂಸ್ಥೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ರೈತರ ಆತ್ಮಹತ್ಯೆ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಸರಕಾರ ಸಮಸ್ಯೆಯನ್ನು ನಿವಾರಿಸುವಲ್ಲಿ ‘ತಪ್ಪು ದಿಕ್ಕಿನಲ್ಲಿ’ ಸಾಗುತ್ತಿದೆ ಎಂಬ ಅನಿಸಿಕೆ ಮೂಡುತ್ತಿದೆ . ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಕುಟುಂಬಕ್ಕೆ ಪರಿಹಾರ ನೀಡಿದಾಕ್ಷಣ ಸಮಸ್ಯೆ ಇತ್ಯರ್ಥವಾಯಿತು ಎಂದು ಭಾವಿಸಬಾರದು ಎಂದು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿತು.







