ಹೌದಿಗಳಿಂದ ಯಮನ್‌ನಲ್ಲಿ ಹತ್ಯಾಕಾಂಡ
ಮಾನವಹಕ್ಕು ಸಂಸ್ಥೆಯ ವರದಿ

ಜಿದ್ದಾ (ಸೌದಿ ಅರೇಬಿಯ), ಮಾ. 27: ಹೌದಿ ಬಂಡುಕೋರರು ಮತ್ತು ಪದಚ್ಯುತ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್‌ರಿಗೆ ನಿಷ್ಠರಾದ ಸೈನಿಕರು ಯಮನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹತ್ಯಾಕಾಂಡ ನಡೆಸಿದ್ದಾರೆ ಎಂದು ಯಮನ್‌ನ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ತನ್ನ ವರದಿಯೊಂದರಲ್ಲಿ ತಿಳಿಸಿದೆ.
ನಿರಾಯುಧ ನಾಗರಿಕರ ವಿರುದ್ಧ ಅಪರಾಧಗಳನ್ನು ನಡೆಸಲಾಗಿದೆ ಎಂದು ಆಯೋಗ ದೂರಿದೆ. ಜನವಸತಿ ಸ್ಥಳಗಳು ಮತ್ತು ಬೃಹತ್ ಮಾರುಕಟ್ಟೆಗಳ ಮೇಲೆ ಫಿರಂಗಿಗಳು ಮತ್ತು ರಾಕೆಟ್ ಉಡಾವಕಗಳನ್ನು ಬಳಸಿ ವಿವೇಚನಾರಹಿತ ಶೆಲ್ ದಾಳಿಗಳನ್ನು ನಡೆಸಲಾಗಿದೆ ಎಂದು ವರದಿ ಆರೋಪಿಸಿದೆ.
ಅಂತಾರಾಷ್ಟ್ರೀಯ ಮಾನವಹಕ್ಕು ಕಾನೂನಿನ ಸಾರಾಸಗಟು ಉಲ್ಲಂಘನೆ ನಡೆಸಲಾಗಿದೆ ಹಾಗೂ ಮಾನವತೆಯ ವಿರುದ್ಧ ಅಪರಾಧಗಳನ್ನು ನಡೆಸಲಾಗಿದೆ ಎಂದು ಬಣ್ಣಿಸಿರುವ ವರದಿ, ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ಹೇಳಿದೆ.
ಹೌದಿ ಬಂಡುಕೋರರು ಮತ್ತು ಸಲೇಹ್ ನಿಷ್ಠ ಸೈನಿಕರು ನಡೆಸಿದ 11 ಹತ್ಯಾಕಾಂಡಗಳನ್ನು ವರದಿಯು ಪಟ್ಟಿ ಮಾಡಿದೆ. ತವಾಹಿ ನಗರದಿಂದ ಸಣ್ಣ ದೋಣಿಗಳಲ್ಲಿ ಪಲಾಯನಗೈಯುತ್ತಿದ್ದ ನಿರಾಯುಧ ನಾಗರಿಕರ ಮೇಲೆ ಮೋರ್ಟಾರ್‌ಗಳನ್ನು ಉದುರಿಸಿ ಕೊಂದ ಘಟನೆಯನ್ನು ಅದು ಪ್ರಮುಖವಾಗಿ ಪ್ರಸ್ತಾಪಿಸಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಹೌದಿ ಬಂಡುಕೋರರ ಗುಂಡಿನ ದಾಳಿ ಮತ್ತು ಶೆಲ್ ದಾಳಿಗಳಲ್ಲಿ 10,811 ಯಮನ್ ನಾಗರಿಕರು ಮೃತಪಟ್ಟಿರುವುದನ್ನು ಮಾನವಹಕ್ಕುಗಳ ತಂಡಗಳು ದಾಖಲಿಸಿವೆ ಎಂದು ವರದಿ ತಿಳಿಸಿದೆ. ಈ ಪೈಕಿ ಹೆಚ್ಚಿನವರು 2015ರಲ್ಲಿ ಮೃತಪಟ್ಟವರು.







