ಕಾಶ್ಮೀರದಲ್ಲಿ ಮುಸ್ಲಿಮರಿಗೆ ಅಲ್ಪಸಂಖ್ಯಾತ ಸ್ಥಾನಮಾನ ವರದಿ ಸಲ್ಲಿಕೆಗೆ ಕೇಂದ್ರ, ರಾಜ್ಯಕ್ಕೆ ಸುಪ್ರೀಂ ತಾಕೀತು

ಹೊಸದಿಲ್ಲಿ,ಮಾ.27: ರಾಜ್ಯದಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬೇಕೇ ಎಂಬುದನ್ನು ನಿರ್ಧರಿಸಲು ಜೊತೆಯಾಗಿ ಕುಳಿತು ಚರ್ಚಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಹಾಗೂ ಜಮ್ಮುಕಾಶ್ಮೀರ ಸರಕಾರಗಳಿಗೆ ಸಲಹೆ ನೀಡಿದೆ. ವಿಷಯವನ್ನು ಇತ್ಯರ್ಥಗೊಳಿಸುವಂತೆ ಉಭಯ ಸರಕಾರಗಳಿಗೂ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಸ್.ಕೆ.ಕೌಲ್ ಅವರನ್ನೊಳಗೊಂಡ ನ್ಯಾಯಪೀಠವು ಸೂಚನೆ ನೀಡಿದ್ದು, ಈ ಬಗ್ಗೆ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದೆ.
‘‘ಇದೊಂದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ನೀವಿಬ್ಬರೂ ಜೊತೆಯಾಗಿ ಕುಳಿತು, ಈ ಬಗ್ಗೆ ನಿಲುವೊಂದನ್ನು ಕೈಗೊಳ್ಳಬೇಕು’’ ಂಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಜಮ್ಮಕಾಶ್ಮೀರದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ ಅವರು ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಿಸಿ ಉತ್ತರವನ್ನು ಸಲ್ಲಿಸದೇ ಇದ್ದುದಕ್ಕಾಗಿ ಸುಪ್ರೀಂಕೋರ್ಟ್, ಕಳೆದ ತಿಂಗಳು ಕೇಂದ್ರ ಸರಕಾರಕ್ಕೆ 30 ಸಾವಿರ ರೂ. ದಂಡ ವಿಧಿಸಿತ್ತು. ಇದೀಗ ಸುಪ್ರೀಂಕೋರ್ಟ್ ಇದೊಂದು ಮಹತ್ವದ ವಿಷಯವಾಗಿರುವುದರಿಂದ ಅರ್ಜಿಗೆ ಉತ್ತರಿಸಲು ಕೇಂದ್ರಕ್ಕೆ ಅಂತಿಮ ಅವಕಾಶವನ್ನು ನೀಡಿದೆ.ಆದಾಗ್ಯೂ ಜಮ್ಮುಕಾಶ್ಮೀರದ ಯಾವುದೇ ಸಮುದಾಯಕ್ಕೆ ಸೌಲಭ್ಯಗಳ ವಿತರಣೆಯನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
ಜಮ್ಮುಕಾಶ್ಮೀರದಲ್ಲಿ ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯಗಳು ಮುಸ್ಲಿಮರ ಪಾಲಾಗುತ್ತಿದೆಯೆಂದು ಆರೋಪಿಸಿ ಜಮ್ಮುವಿನ ನ್ಯಾಯವಾದಿ ಅಂಕುರ್ ಶರ್ಮಾ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ, ರಾಜ್ಯ ಸರಕಾರ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಅಲ್ಪಸಂಖ್ಯಾತರನ್ನು ಗುರುತಿಸಲು ಜಮ್ಮುಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಂತೆಯೂ ಪಿಐಎಲ್ ಆಗ್ರಹಿಸಿದೆ.