ಶಾಲಾ ಬಾಲಕನಿಗೆ ನೀಲಿಚಿತ್ರ ತೋರಿಸಿದವನನ್ನು ಥಳಿಸಿದ ಸಾರ್ವಜನಿಕರು

ಬಂಟ್ವಾಳ, ಮಾ. 27: ಶಾಲಾ ಬಾಲಕನಿಗೆ ನೀಲಿ ಚಿತ್ರ ತೋರಿಸಿ ಅಶ್ಲೀಲವಾಗಿ ವರ್ತಿಸಿದ ಮೊಬೈಲ್ ಅಂಗಡಿಯ ಕೆಲಸದವನೋರ್ವನಿಗೆ ಸ್ಥಳಿಯವರು ಹಲ್ಲೆ ನಡೆಸಿರುವ ಘಟನೆ ಮೆಲ್ಕಾರ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೆಲ್ಕಾರ್‌ನ ಝೆನಿತ್ ಮೊಬೈಲ್ ಅಂಗಡಿಯ ಕೆಲಸದವ, ಪೆರ್ನೆ ನಿವಾಸಿ ರಕ್ಷಿತ್ ಶೆಟ್ಟಿ ಎಂಬಾತನೇ ಸ್ಥಳೀಯರಿಂದ ಹಲ್ಲೆಗೊಳಗಾದವ.
ಬೊಗೋಡಿಯ ನಿವಾಸಿಯಾದ ಶಾಲಾ ಬಾಲಕನೋರ್ವ ಮೊಬೈಲ್ ರಿಪೇರಿಗೆಂದು ಇಂದು ಸಂಜೆ ಸುಮಾರು 7 ಗಂಟೆ ಸುಮಾರಿಗೆ ಝೆನಿತ್ ಮೊಬೈಲ್ ಅಂಗಡಿಗೆ ತೆರಳಿದ್ದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ತನ್ನ ಮೊಬೈಲ್‌ನಲ್ಲಿದ್ದ ನೀಲಿ ಚಿತ್ರವನ್ನು ವೀಕ್ಷಿಸುವಂತೆ ಬಾಲಕನಿಗೆ ಒತ್ತಾಯಿಸಿದ್ದಲ್ಲದೆ ನೀಲಿ ಚಿತ್ರ ನೋಡಲು ನಿರಾಕರಿಸಿದ ಬಾಲಕನಲ್ಲಿ ಆತ ಅಶ್ಲೀಲವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಅಂಗಡಿಯಿಂದ ಮರಳಿದ ಬಾಲಕ ಸ್ಥಳೀಯರಲ್ಲಿ ವಿಷಯ ತಿಳಿಸಿದ್ದರಿಂದ ಮೊಬೈಲ್ ಅಂಗಡಿಗೆ ಹೋದ ಸ್ಥಳೀಯರು ರಕ್ಷಿತ್ ಶೆಟ್ಟಿಯನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲೂ ಅನುಚಿತವಾಗಿ ವರ್ತಿಸಿದ ಆತನಿಗೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಮೆಲ್ಕಾರ್ ಪೇಟೆಯಲ್ಲಿ ಜನ ಸೇರತೊಡಗಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಜನರ ಗುಂಪನ್ನು ಚದುರಿಸಿದ್ದು ಆರೋಪಿ ರಕ್ಷಿತ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಕ್ಷಿತ್ ಶೆಟ್ಟಿ ವಿರುದ್ಧ ಈ ಹಿಂದೆಯು ಇಂತದ್ದೇ ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಸೋಮವಾರ ರಾತ್ರಿವರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.







