ಬಂಟ್ವಾಳ ಯೋ.ಪ್ರಾ. ಅಧ್ಯಕ್ಷರಾಗಿ ಸದಾಶಿವ ಬಂಗೇರ ಅಧಿಕಾರ ಸ್ವೀಕಾರ

ಬಂಟ್ವಾಳ, ಮಾ. 27: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಸದಾಶಿವ ಬಂಗೇರರವರು ಸೋಮವಾರ ಪುರಸಭಾ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಯೋಜನಾ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ನೂತನ ಅಧ್ಯಕ್ಷ ಸದಾಶಿವ ಬಂಗೇರರವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಶಾಹುಲ್ ಹಮೀದ್, ಎಂ.ಎಸ್.ಮುಹಮ್ಮದ್, ರವೀಂದ್ರ ಕಂಬಳಿ, ಮಂಜುಳಾ ಮಾವೆ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ, ತಾಪಂ ಸದಸ್ಯ ಪ್ರಭಾಕರ್ ಪ್ರಭು, ಕುಮಾರ ಭಟ್, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ್ ಪೂಜಾರಿ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಪ್ರವೀಣ್, ಗಂಗಾಧರ, ವಸಂತಿ, ಯಾಸ್ಮೀನ್, ಚಂಚಲಾಕ್ಷಿ, ಪ್ರಭಾ ಆರ್. ಸಾಲ್ಯಾನ್, ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಸುಗುಣಕಿನಿ, ಮುನೀಶ್ ಅಲಿ, ಬಿ.ಮೋಹನ್, ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಕೆಪಿಸಿಸಿ ಸದಸ್ಯ ಅಶ್ವಿನಿ ವಕೀಲ, ಮುಖಂಡ ಮುಹಮ್ಮದ್ ನಂದಾವರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಅಭಿಮಾನಿಗಳು ಈ ಸಂದರ್ಭದಲ್ಲಿ ಬಂಗೇರರವರನ್ನು ಅಬಿನಂದಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸದಾಶಿವ ಬಂಗೇರ, ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ, ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಲು ಗಮನಹರಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಬಂಟ್ವಾಳದ ಸಮಗ್ರ ಅಭಿವೃದ್ಧಿಯ ದೆಸೆಯಲ್ಲಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲಾಗುವುದು. ಸರಕಾರದ ನಿರ್ದೇಶನಗಳನ್ವಯ ಕಾನೂನು ಚೌಕಟ್ಟಿನೊಳಗೆ ತನ್ನ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಅವರು, ಸರಕಾರದ ಕಟ್ಟಡಗಳು ಯಾವುದೇ ಗೋದಾಮಿನಂತಾಗದೆ ಅದೊಂದು ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆಯನ್ನು ರೂಪಿಸಬೇಕೆಂದು ಸದಾಶಿವ ಬಂಗೇರ ಸಲಹೆ ನೀಡಿದರು.
ಅಧಿಕಾರ ಹಸ್ತಾಂತರಿಸಿದ ಯೋಜನಾ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಮಾತನಾಡಿ, ಪುರಸಭೆ ವಾಸಿಗಳು ಯಾವುದೇ ಕಟ್ಟಡಗಳನ್ನು ನಿರ್ಮಿಸುವ ಮೊದಲೇ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇತ್ತೀಚೆಗಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಬಳಿಕ ಪರವಾಣಿಗೆ ಪಡೆಯುವ ಪದ್ಧತಿ ಬೆಳೆದಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.







