ಜ್ಞಾನಕ್ಕಿಂತ ಪವಿತ್ರ ವಸ್ತು ಇನ್ನೊಂದಿಲ್ಲ: ಅದಮಾರು ಶ್ರೀ

ಉಡುಪಿ, ಮಾ.27: ಜ್ಞಾನಕ್ಕಿಂತ ಮಹತ್ವ ಹಾಗೂ ಪವಿತ್ರವಾದ ವಸ್ತು ಇನ್ನೊಂದಿಲ್ಲ. ಇದರಿಂದ ಸಮಾಜದಲ್ಲಿರುವ ಎಲ್ಲವನ್ನು ಗಳಿಸಿ ಗೌರವಕ್ಕೆ ಪಾತ್ರವಾಗಬಹುದು. ದೇವಾಲಯ ಎಂಬ ವಿದ್ಯಾಮಂದಿರದಲ್ಲಿ ದೇವರೆಂಬ ವಿದ್ಯಾರ್ಥಿಗಳನ್ನು ಪ್ರತಿಷ್ಠಾಪಿಸಿ ಅರ್ಚಕರೆಂಬ ಅಧ್ಯಾಪಕರನ್ನು ನೇಮಿಸಿ ಜ್ಞಾನ ನೀಡುವ ಕಾರ್ಯ ನಡೆಯಬೇಕು ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ನಾವು ಇಂದು ಜೀವನದಲ್ಲಿ ಎತ್ತರ ಸ್ಥಾನಕ್ಕೇರಲು ಕಾಲೇಜುಗಳ ಕೊಡುಗೆ ಅಪಾರ. ಅಲ್ಲಿ ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ತಿಳಿಸಿದರು.
ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿ ನಾರಾಯಣ ಅಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ರಾವ್, ಆಡಳಿತ ಮಂಡಳಿ ಉಪಾಧ್ಯಕ್ಷ ಶ್ರೀಪತಿ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನ ನಿರ್ದೇಶಕ ಡಾ.ಎಂ.ಆರ್.ಹೆಗಡೆರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾ ಯಿತು. ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ವರದಿ ವಾಚಿಸಿದರು.
ವಿದ್ಯಾರ್ಥಿ ಸಂಘಟನೆಯ ಚೈತ್ರಾ ಕಿಣಿ, ಜಯಕರ ಶೆಟ್ಟಿ, ಮಧುಸೂದನ್ ಹೆಗಡೆ, ಶಿವಾನಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿ ದರು. ಪ್ರಾಧ್ಯಾಪಕ ಡಾ.ರಾಮಕೃಷ್ಣ ಉಡುಪ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.







