ಸೊತ್ತು ಮುಟ್ಟುಗೋಲು ಹಾಕುವ ಲಕ್ಸಂಬರ್ಗ್ ನಿರ್ಧಾರದ ವಿರುದ್ಧ ಮೇಲ್ಮನವಿ

ಟೆಹರಾನ್, ಮಾ. 27: ತನ್ನ 1.6 ಬಿಲಿಯ ಡಾಲರ್ (ಸುಮಾರು 10,400 ಕೋಟಿ ರೂಪಾಯಿ) ವೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಲಕ್ಸಂಬರ್ಗ್‌ನ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಇರಾನ್‌ನ ಸೆಂಟ್ರಲ್ ಬ್ಯಾಂಕ್ ರವಿವಾರ ಹೇಳಿದೆ.
ಈ ಮೊತ್ತವನ್ನು 2001 ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡಲು ಬಳಸುವುದಾಗಿ ಅಮೆರಿಕ ಹೇಳಿದೆ.
ತಾನು ಡಾಲರ್‌ಗಳಲ್ಲಿ ನಡೆಸುತ್ತಿರುವ ಇತರ ವ್ಯವಹಾರಗಳನ್ನೂ ಸ್ಥಗಿತಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬ್ಯಾಂಕ್ ಹೇಳಿದೆ. ತೈಲ ಮಾರಾಟಕ್ಕಾಗಿ ಇರಾನ್ ಈಗಲೂ ಡಾಲರ್‌ಗಳನ್ನು ಸ್ವೀಕರಿಸುತ್ತಿದೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಅದರ ಮೇಲೆ ಈ ಹಿಂದೆ ಹೇರಲಾದ ದಿಗ್ಬಂಧನೆಯ ಅವಧಿಯಲ್ಲಿ, ಆ ದೇಶದ 1.6 ಬಿಲಿಯ ಡಾಲರ್ ಮೊತ್ತದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆ ಮೊತ್ತವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಬೇಕೆಂದು ಕೋರಿ ಟೆಹರಾನ್ ಸಲ್ಲಿಸಿದ ಮನವಿಯನ್ನು ಲಕ್ಸಂಬರ್ಗ್‌ನ ನ್ಯಾಯಾಲಯವೊಂದು ಕಳೆದ ವಾರ ತಳ್ಳಿಹಾಕಿತ್ತು.
ಅಲ್-ಖಾಯಿದ ಭಯೋತ್ಪಾದಕರಿಗೆ ತನ್ನ ನೆಲದ ಮೂಲಕ ಹಾದು ಹೋಗಲು ಇರಾನ್ ಅವಕಾಶ ನೀಡಿರುವುದರಿಂದ 2001ರ ಭಯೋತ್ಪಾದಕ ದಾಳಿಯಲ್ಲಿ ಆ ದೇಶವೂ ಆಂಶಿಕವಾಗಿ ಭಾಗಿಯಾಗಿದೆ ಎಂಬುದಾಗಿ ನ್ಯೂಯಾರ್ಕ್‌ನ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದರು. ಹಾಗಾಗಿ, ದಾಳಿಯ ಸಂತ್ರಸ್ತರಿಗೆ ಈ ಹಣವನ್ನು ಪರಿಹಾರವಾಗಿ ವಿತರಿಸಲು ಅಮೆರಿಕ ಮುಂದಾಗಿದೆ.







