ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ
ಕಾರ್ಕಳ, ಮಾ.27: ಸರಕಾರಿ ಶಾಲೆಗಳ ಅಗತ್ಯ, ಅಲ್ಲಿರುವ ಸವಾಲು, ಅದಕ್ಕೆ ಪರಿಹಾರ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಮಂಡನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಬಜಗೋಳಿ ಸ.ಮಾ.ಹಿ.ಪ್ರಾ.ಶಾಲಾಭಿವದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಅವರು ಹೊಟೇಲ್ ಪ್ರಕಾಶ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸಿ ಮುಂದುವರಿಸುವುದಕ್ಕೆ ಅನುಕೂಲಕರ ಮಾಹಿತಿಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಪ್ರಬಂಧ ಸ್ಪರ್ಧೆಯು ಸಹಕಾರಿಯಾಗಲಿದೆ.
ಸ್ಪರ್ಧಾ ಆಕಾಂಕ್ಷಿಗಳು ಬರೆದು ಕಳುಹಿಸುವ ಪ್ರತಿಯೊಂದು ಪ್ರಬಂಧದಲ್ಲಿ ಉಲ್ಲೇಖಿಸಿರುವ ಮಹತ್ವದ ವಿಚಾರಗಳನ್ನು ಕ್ರೋಡೀಕರಿಸಿದ ವರದಿ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸುವುದು ಇದರ ಉದ್ದೇಶವಾಗಿದೆ. ಅವುಗಳಲ್ಲಿ ವಿದ್ಯಾರ್ಥಿ ವಿಭಾಗ, ಸಾರ್ವಜನಿಕ ವಿಭಾಗ ಹಾಗೂ ಸರಕಾರಿ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧಾಳುಗಳ ವಿವರವನ್ನು ಪ್ರತ್ಯೇಕವಾಗಿ ನಮೂದಿಸಿ ಕಳುಹಿಸಿಕೊಡಬೇಕಾಗಿದೆ ಎಂದರು. ಬಜಗೋಳಿ ಸ.ಮಾ.ಹಿ.ಪ್ರಾ.ಶಾಲೆಯು ವಜ್ರಮಹೋತ್ಸವ ಸಂಭ್ರಮಾಚರಣೆಯ ದಾಪುಗಾಲು ಇಡುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಅಗತ್ಯ, ಅಲ್ಲಿರುವ ಸವಾಲು, ಅದಕ್ಕೆ ಪರಿಹಾರ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಮೂರು ಪುಟ ಮೀರದಂತೆ ಬರೆಯುವ ಪ್ರಬಂಧವನ್ನು ಏ.8ರ ಒಳಗಾಗಿ ಮುಖ್ಯ ಶಿಕ್ಷಕರು, ಸ.ಮಾ.ಹಿ.ಪ್ರಾ.ಶಾಲೆ ಕಾರ್ಕಳ ಇಲ್ಲಿಯ ವಿಳಾಸಕ್ಕೆ ಅಂಚೆ ಚೀಟಿ ಅಂಟಿಸಿ ಕಳುಹಿಸಬಹುದಾಗಿದೆ ಮೂರು ವಿಭಾಗಗಳಲ್ಲೂ ಪ್ರತ್ಯಪ್ರತ್ಯೇಕವಾಗಿ ಆಯ್ದ ಮೂವರಿಗೆ ಪ್ರಥಮ, ದ್ವಿತೀಯ, ತತೀಯ ಹಂತಗಳಲ್ಲಿ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುತ್ತದೆ. ಮೂವರು ತೀರ್ಪುಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸರಕಾರದಿಂದ ಉತ್ತಮ ಸ್ಪಂದನ:
ಬಜಗೋಳಿ ಸ.ಮಾ.ಹಿ.ಪ್ರಾ.ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಗುಣಾತ್ಮಕ ಶಿಕ್ಷಣದಿಂದ ಪರಿಣಾಮಕಾಗಿ ಅನುಷ್ಠಾನ ವಿಚಾರಗೋಷ್ಟಿಯ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಆಳ್ವ ವಹಿಸಿದ್ದರು. ಅಂದಿನ ವಿಚಾರಗೋಷ್ಟಿಯಲ್ಲಿ ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು. ಅಂದು ಕೈಗೊಂಡು ಕಳುಹಿಸಿದ ನಿರ್ಣಯಗಳನ್ನು ಸರಕಾರವು ಉತ್ತಮ ರೀತಿಯಲ್ಲಿ ಸ್ಪಂದಿಸಿದೆ ಎಂದರು.
ಶಾಲಾವಯಲ್ಲಿ ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಳ್ಳುವುದನ್ನು ಕಡಿತಗೊಳಿಸಬೇಕು. ರಜಾದಿನಗಳಲ್ಲಿ ತರಬೇತಿ ನಡೆಸಬೇಕು. ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮಾಜದ ಹಿತದಷ್ಟಿಯಿಂದ ಸರಕಾರಿ ಶಾಲೆಯಲ್ಲಿ ಶಾಲಾ ಡ್ರೆಸ್‌ಕೋಡ್ ಕಡ್ಡಾಯಗೊಳಿಸಬೇಕೆಂಬುವುದು ಅಡಕವಾಗಿತ್ತು ಎಂಬ ಬೇಡಿಕೆಗಳು ಸರಕಾರದ ಮಟ್ಟದಲ್ಲಿ ಅನುಷ್ಠಾನಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಜಗೋಳಿ ಶಾಲಾ ಮುಖ್ಯ ಶಿಕ್ಷಕ ವಿಜಯ ಕುಮಾರ್ ಪಿ., ಉಪಸ್ಥಿತರಿದ್ದರು.







