ಬೈಂದೂರು: ರಸ್ತೆ ಅಪಘಾತಕ್ಕೆ ಓರ್ವ ಬಲಿ; 12 ಮಂದಿಗೆ ಗಾಯ

ಉಡುಪಿ, ಮಾ.27: ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಂದೂರು ನಾಗೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರನ್ನು ಟ್ಯಾಂಕರ್ ಚಾಲಕ ಉಡುಪಿ ಶಿವಳ್ಳಿಯ ನಾರಾಯಣ ಆಚಾರ್ ಎಂದು ಗುರುತಿಸಲಾಗಿದೆ.
ಕುಂದಾಪುರದಿಂದ ಬೈಂದೂರು ಕಡೆಗೆ ಬರುತ್ತಿದ್ದ ಬಸ್ ಮತ್ತು ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ಸಿಲುಕಿ ಬೈಕೊಂದು ಕೂಡಾ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





