ಕಾಶ್ಮೀರದಲ್ಲಿ ಪೆಲ್ಲೆಟ್‌ಗನ್‌ಗೆ ಬದಲಿ ಸಾಧನ ಬಳಸಲು ಕೇಂದ್ರಕ್ಕೆ ಸುಪ್ರೀಂ ಸಲಹೆ

ಹೊಸದಿಲ್ಲಿ,ಮಾ.27: ಜಮ್ಮುಕಾಶ್ಮೀರದಲ್ಲಿ ಉದ್ರಿಕ್ತ ಗುಂಪುಗಳನ್ನು ನಿಯಂತ್ರಿಸಲು ಪೆಲ್ಲೆಟ್‌ಗನ್‌ಗಳಿಗೆ ಪರ್ಯಾಯ ಸಾಧನಗಳನ್ನು ಬಳಸುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಮೋದಿ ಸರಕಾರಕ್ಕೆ ಸಲಹೆ ನೀಡಿದೆ.
ಪೆಲ್ಲೆಟ್‌ಗನ್‌ಗಳಿಗೆ ಪರ್ಯಾಯವಾಗಿ ಬಳಸಲಾಗುವ ಸಾಧನಗಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿರಬೇಕೆಂದು ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಸಂಜಯ್ ಕಿಶನ್ ಅವರಿದ್ದ ನ್ಯಾಯಪೀಠ ಸರಕಾರಕ್ಕೆ ತಿಳಿಸಿತು.
ಭದ್ರತಾಪಡೆಗಳು ಪೆಲ್ಲೆಟ್‌ಗನ್‌ಗಳನ್ನು ಬಳಸುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜಮ್ಮುಕಾಶ್ಮೀರ ಹೈಕೋರ್ಟ್ ವಕೀಲರ ಸಂಘವು ಸಲ್ಲಿಸಿದ್ದ ಅರ್ಜಿಯ ಆಲಿಕೆಯ ಸಂದರ್ಭ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ಕೇಂದ್ರ ಸರಕಾರದ ಅಭಿಪ್ರಾಯವನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ತಿಳಿಸುವುದಾಗಿ ಅಟಾರ್ನಿ ಜನರಲ್ ಮುಕುಲ್‌ರೋಹಟಗಿ ಹೇಳಿದರು. ಪೆಲ್ಲೆಟ್ ಗನ್‌ಗಳ ಬದಲಿಗೆ ಪರ್ಯಾಯ ಸಾಧನಗಳ ಬಳಕೆಯ ಬಗ್ಗೆ ಪರಿಶೀಲಿಸಲು ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತು.





