ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಪ್ರತಿಭಟನೆ

ಪುತ್ತೂರು, ಮಾ.27: ಅಚ್ಛೇ ದಿನ್ ಎನ್ನುತ್ತಿರುವ ಮೋದಿ ಸರಕಾರವು ಇದೀಗ ಗ್ಯಾಸ್ ಮತ್ತು ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರು ತತ್ತರಿಸುವಂತೆ ಮಾಡುತ್ತಿದೆ. ಮೋದಿಗೆ ಮಾತ್ರ ಅಚ್ಛೇದಿನ್ ಬಂದಿದ್ದು, ಜನಸಾಮಾನ್ಯರಿಗಿದು ಕೆಟ್ಟ ದಿನವಾಗಿದೆ ಎಂದು ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಟೀಕಿಸಿದರು.
ಪುತ್ತೂರು ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸೋಮವಾರ ಕೇಂದ್ರ ಸರಕಾರದ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ಬೆಲೆಏರಿಕೆ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪಗೌಡ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಶದ್ ದರ್ಬೆ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಅಮಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಹಿಂದುಳಿದ ವರ್ಗಗಳ ಅಧ್ಯಕ್ಷ ರೋಶನ್ ರೈ ಮಾತನಾಡಿ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿದರು. ಪ್ರತಿಭಟನಾಕಾರರು ಗ್ಯಾಸ್ ಸಿಲಿಂಡರ್ ಪ್ರದರ್ಶಿಸುವುದರೊಂದಿಗೆ ಒಲೆಯಲ್ಲಿ ಚಾ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಸ್ವಾಗತಿಸಿದರು. ಸಾಯಿರಾ ಝುಬೇರ್ ಮನವಿ ಪತ್ರ ವಾಚಿಸಿದರು. ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ವಂದಿಸಿದರು. ಇಸಾಕ್ ಸಾಲ್ಮರ ನಿರೂಪಿಸಿದರು.





