ಟಿ.ಆರ್.ಪಿ. ಮತ್ತು ಆಧಾರ ರಹಿತ ವೈದ್ಯಕೀಯ ಸುದ್ದಿಗಳು
ಮಾನ್ಯರೆ,
ಇತ್ತೀಚೆಗೆ ಮಲಯಾಳಂನ ಪ್ರಸಿದ್ಧ ಸುದ್ದಿ ವಾಹಿನಿಯೊಂದರಲ್ಲಿ ವೈದ್ಯಕೀಯ ಪ್ರಯೋಗಾಲಯಗಳಿಗೆ ಸಂಬಂಧಿಸಿದಂತಹ ಸುದ್ದಿಯೊಂದು ಪ್ರಸಾರವಾಗಿತ್ತು. ಅದೇನೆಂದರೆ ‘‘ನೀವು ಕೋಳಿಯ, ನಾಯಿಯ ಅಥವಾ ಇನ್ಯಾವುದೇ ಪ್ರಾಣಿಯ ರಕ್ತವನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ನೀಡಿ ನಿರ್ದಿಷ್ಟ ಪರೀಕ್ಷೆಗಳನ್ನು ಮಾಡಿಕೊಡಲು ಕೋರಿದರೆ ಅವರು ಮನುಷ್ಯನ ರಕ್ತ ಪರೀಕ್ಷೆಯಂತಹದ್ದೇ ಪರೀಕ್ಷೆ ಮಾಡಿ ಕೊಡುತ್ತಾರೆ..... ಮೋಸ ಮೋಸ ಮೋಸ....!!! ಪ್ರಯೋಗಾಲಯಗಳ ಬಗ್ಗೆ ಜಾಗರೂಕರಾಗಿರಿ’’ ಈ ಸುದ್ದಿಯ ವೀಡಿಯೊ ಕ್ಲಿಪ್ ವೈರಲ್ ಆಗಿ ಬಿಟ್ಟಿದೆ. ಜನ ಈ ಸುದ್ದಿಯನ್ನು ಕುರುಡಾಗಿ ನಂಬಿ ಬಿಟ್ಟಿದ್ದಾರೆ ಕೂಡಾ.....
ವೈದ್ಯಕೀಯ ಕ್ಷೇತ್ರದ ಕುರಿತು ಇಂತಹ ಸುದ್ದಿ ಪ್ರಸಾರ ಮಾಡುವವರಿಗೆ ಆ ಕ್ಷೇತ್ರದ ಕುರಿತಂತೆ ಕನಿಷ್ಠ ಜ್ಞಾನವಾದರೂ ಇರಬೇಕು. ಈ ಸುದ್ದಿಯ ಹಿಂದಿನ ತರ್ಕವೇನೆಂದು ನೋಡೋಣ.
ನೀವು ಯಾವುದೇ ವೈದ್ಯಕೀಯ ಪ್ರಯೋಗಾಲಯಕ್ಕೆ ನಾಯಿಯ ರಕ್ತದ ನಮೂನೆಯೊಂದನ್ನು ಕೊಂಡೊಯ್ದು ಯಾವುದಾದರೂ ನಿರ್ದಿಷ್ಟ ಪರೀಕ್ಷೆಯನ್ನು ಮಾಡಲು ಕೋರಿದರೆ ಅವರು ಮಾಡಿಕೊಡುತ್ತಾರೆ. ಅದು ಸಾಧ್ಯವೂ ಇದೆ. ಮನುಷ್ಯನ ರಕ್ತದ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಬಹುದೋ ಅವೆಲ್ಲಾ ಪರೀಕ್ಷೆಯನ್ನು ನಾಯಿಯ ರಕ್ತದಿಂದಲೂ ಮಾಡಬಹುದು. ಮನುಷ್ಯನಿಗಿರುವಂತೆಯೇ ನಾಯಿಗೂ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ ಹೀಗೆ ಎಲ್ಲವೂ ಇರುತ್ತದೆ. ಮನುಷ್ಯನ ದೇಹದಲ್ಲಿ ರಕ್ತ ಸಂಚರಿಸುವಂತೆಯೇ ನಾಯಿಯ ದೇಹದಲ್ಲೂ ರಕ್ತ ಸಂಚರಿಸುತ್ತದೆ. ಅನೇಕ ರಕ್ತ ಪರೀಕ್ಷೆಗಳ ನಾರ್ಮಲ್ ವ್ಯಾಲ್ಯೂ ನಾಯಿಗೂ ಮನುಷ್ಯನಿಗೂ ಒಂದೇ ಆಗಿರುತ್ತದೆ. ನೀವು ಅದನ್ನು ನಾಯಿಯ ರಕ್ತ ಎಂದು ಹೇಳುವವರೆಗೆ ಯಾವುದೇ ವೈದ್ಯನಿಗೋ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞನಿಗೋ ಮೇಲ್ನೋಟಕ್ಕೆ ಅದು ನಾಯಿಯ ರಕ್ತವೋ ಮನುಷ್ಯನ ರಕ್ತವೋ ಎಂದು ತಿಳಿಯುವುದಿಲ್ಲ.
ನೀವು ಯಾವುದಾದರೂ ಸಂಶೋಧನಾ ಪ್ರಯೋಗಾಲಯಕ್ಕೆ ಕೊಂಡೊಯ್ದು ಇದು ಯಾವುದರ ರಕ್ತವೆಂದು ಪರೀಕ್ಷಿಸಲು ಕೋರಿದರೆ ಮಾತ್ರ ಅವರು ಅದನ್ನು ನಾಯಿಯ ರಕ್ತವೋ, ಮನುಷ್ಯನ ರಕ್ತವೋ ಅಥವಾ ಇನ್ಯಾವುದೋ ಪ್ರಾಣಿಯ ರಕ್ತವೋ ಎಂದು ಪತ್ತೆ ಹಚ್ಚಲು ಸಾಧ್ಯ. ಯಾವುದೇ ವೈದ್ಯಕೀಯ ಪ್ರಯೋಗಾಲಯಗಳು ಯಾವ ಪ್ರಾಣಿಯ ರಕ್ತವೆಂದು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಳವಡಿಸುವುದಿಲ್ಲ. ಅದರ ಅಗತ್ಯ ಯಾರಿಗೂ ಬೀಳುವುದಿಲ್ಲ. ಮನುಷ್ಯನಿಗೆ ಬಾಧಿಸಿದಂತೆ ನಾಯಿಗೂ ರಕ್ತಹೀನತೆ, ಕ್ಯಾನ್ಸರ್, ಮೂತ್ರಪಿಂಡದ ವೈಫಲ್ಯ, ಮಧುಮೇಹ ಮುಂತಾದ ಕಾಯಿಲೆಗಳು ಬಾಧಿಸಬಹುದು. ಹಾಗೆ ನೋಡ ಹೋದರೆ ಎಚ್‌ಐವಿ ಮೊಟ್ಟಮೊದಲು ಬಾಧಿಸಿದ್ದು ಮನುಷ್ಯನಿಗಲ್ಲ. ಅದು ಗೊರಿಲ್ಲಾಗಳಿಂದ ಮನುಷ್ಯನಿಗೆ ಹರಡಿದ್ದು. ಎಚ್‌ಐವಿ ಪೀಡಿತ ಗೊರಿಲ್ಲಾವೊಂದರ ರಕ್ತದ ನಮೂನೆ ನೀಡಿ ಎಚ್‌ಐವಿ ಪರೀಕ್ಷೆ ಮಾಡಲು ಕೋರಿದರೆ ಎಚ್‌ಐವಿ ಪಾಸಿಟೀವ್ ಫಲಿತಾಂಶ ಬರಬಹುದು.
ಇಂದು ಕೆಲವು ಸುದ್ದಿ ವಾಹಿನಿಗಳಿಗೆ ತಮ್ಮ ಟಿಆರ್‌ಪಿ ಏರಿಸಲು ವೈದ್ಯಕೀಯ ಜಗತ್ತೆಂದರೆ ಬರೇ ಮೋಸ, ದಗಲ್ಬಾಜಿ, ವಂಚನೆ ಎಂಬ ಸುದ್ದಿಗಳನ್ನು ಪ್ರಸಾರ ಮಾಡುವ ಚಟ ಹತ್ತಿಕೊಂಡಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕಳ್ಳರಿರಬಹುದು, ಸುಳ್ಳರಿರಬಹುದು, ವಂಚಕರಿರಬಹುದು ಅಂದ ಮಾತ್ರಕ್ಕೆ ಆ ಕ್ಷೇತ್ರದಲ್ಲಿ ಪ್ರಾಮಾಣಿಕರಿಲ್ಲ ಎನ್ನಲು ಸಾಧ್ಯವೇ.....? ಯಾವುದೇ ವೈದ್ಯನನ್ನು ಅಪ್ರಾಮಾಣಿಕ ಎನ್ನಲು ಈ ಮೇಲಿನ ಕುತಂತ್ರಗಳು ಮಾನದಂಡವಲ್ಲ.







