ಎಲ್‌ನಿನೊ ಎಫೆಕ್ಟ್: ಈ ವರ್ಷವೂ ಕೈಕೊಡಲಿದೆ ಮುಂಗಾರು
ಮತ್ತೊಂದು ಬರಗಾಲದ ಗುಮ್ಮ!
ಹೊಸದಿಲ್ಲಿ, ಮಾ.28: ಎಲ್‌ನಿನೊ ಪರಿಣಾಮ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಮುಂಗಾರು ಮಳೆ ಕೈಕೊಡುವ ಲಕ್ಷಣವಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಏಜೆನ್ಸಿ ಸ್ಕೈಮೆಟ್ ಹೇಳಿದೆ. ಪ್ರಸಕ್ತ ವರ್ಷದ ಜುಲೈ- ಆಗಸ್ಟ್ ವೇಳೆಗೆ ಎನ್‌ನಿನೋ ಪರಿಣಾಮ ತೀವ್ರವಾಗುವ ಸಾಧ್ಯತೆ ಇದ್ದು, ಇದು ಮುಂಗಾರು ಮಳೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಭವಿಷ್ಯ ನುಡಿದಿದೆ.
ಮುಂಗಾರು ಮಳೆಯನ್ನೇ ಅವಲಂಬಿಸಿರುವ ಭಾರತದ ಕೃಷಿ ಕ್ಷೇತ್ರದ ಮೇಲೆ ಇದು ಗಂಭೀರ ಪರಿಣಾಮ ಬೀರುವ ನಿರೀಕ್ಷೆ ಇದೆ. ಇಷ್ಟಾಗಿಯೂ ಮುಂಗಾರು ಮಳೆ ಮೋಡಗಳು ಈಗಷ್ಟೇ ರೂಪುಗೊಳ್ಳುತ್ತಿದ್ದು, ನಿಖರವಾಗಿ ಅಂದಾಜಿಸುವುದು ಕಷ್ಟಸಾಧ್ಯ ಎಂದು ಸ್ಕೈಮೆಟ್ ಹೇಳಿದೆ. "ಈ ವರ್ಷದ ಮುಂಗಾರಿನಲ್ಲಿ ವಾಡಿಕೆ ಮಳೆಯ ಶೇಕಡ 95ರಷ್ಟು ಮಳೆ ಬೀಳುವ ನಿರೀಕ್ಷೆ ಇದೆ. ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ದೀರ್ಘಾವಧಿ ಸರಾಸರಿ 887 ಮಿಲಿಮೀಟರ್ ಆಗಿದೆ ಎಂದು ಹೇಳಿದೆ.
ಕಾಲಕಾಲಕ್ಕೆ ಮುನ್ಸೂಚನೆಯನ್ನು ಪರಿಷ್ಕರಿಸಲಾಗುವುದು ಎಂದು ಹೇಳಿರುವ ಸ್ಕೈಮೆಟ್, ವಾಡಿಕೆ ಮಳೆಯಾಗುವ ಸಾಧ್ಯತೆ ಶೇಕಡ 50ರಷ್ಟಿದೆ ಎಂದು ಸ್ಪಷ್ಟಪಡಿಸಿದೆ. ಭಾರತದ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಏಜೆನ್ಸಿ ಮುಂದಿನ ತಿಂಗಳು ಆರಂಭಿಕ ಮುನ್ಸೂಚನೆಯನ್ನು ಬಿಡುಗಡೆ ಮಾಡಲಿದೆ. ಕಳೆದ ವರ್ಷ ಹವಾಮಾನ ಇಲಾಖೆ ಅಧಿಕ ಮಳೆಯಾಗುತ್ತದೆ ಎಂದು ಆರಂಭಿಕ ಮುನ್ಸೂಚನೆ ನೀಡಿದ್ದರೆ, ಕೊನೆಗೆ ಅದನ್ನು ಪರಿಷ್ಕರಿಸಿ, ವಾಡಿಕೆ ಮಳೆಯಾಗುತ್ತದೆ ಎಂದು ನಿರೀಕ್ಷಿಸಿತ್ತು.
ಸ್ಕೈಮೆಟ್ ಕಳೆದ ವರ್ಷ ವಾಡಿಕೆಗಿಂತ ಶೇಕಡ 109ರಷ್ಟು ಮಳೆಯಾಗುತ್ತದೆ ಎಂದು ಅಂದಾಜು ಮಾಡಿತ್ತು. ಆದರೆ ವಾಸ್ತವವಾಗಿ ಶೇಕಡ 97ರಷ್ಟು ಮಾತ್ರ ಮಳೆಯಾಗಿದೆ. 2015ರಲ್ಲಿ ಸಾಮಾನ್ಯ ಮಳೆಯಾಗುತ್ತದೆ ಎಂದು ಅಂದಾಜು ಮಾಡಿದ್ದರೆ, ಆ ವರ್ಷ ಬರಗಾಲ ಬಂದಿತ್ತು.