ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ಇನ್ನಿಲ್ಲ

ಬಂಟ್ವಾಳ, ಮಾ.28: ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ಬಂಟ್ವಾಳ ತಾಲೂಕಿನ ಗಡಿಭಾಗವಾದ ಪೆರ್ಲದ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ ಮಹಾತ್ಮ ಗಾಂಧೀಜಿ ಜೊತೆ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಹೆಗ್ಗಳಿಕೆ ಇವರದು.
ಶಿಕ್ಷಕರಾಗಿ ಹಾಗೂ ಸೇನೆಯಲ್ಲಿ ಕಾರ್ಯನಿವರ್ಹಿಸಿದ್ದ ಮದನ್ ಮಾಸ್ತರ್ ಅವರು ರಾಜಿ ಪಂಚಾಯಿತಿಯ ಮದ್ಯಸ್ಥಿಕೆದಾರರಾಗಿ ಗಡಿನಾಡಿನಲ್ಲಿ ಜನಪ್ರಿಯತೆ ಪಡೆದಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಮದನ್ ಮಾಸ್ತರ್ ಅವರು ಸ್ಥಳೀಯವಾಗಿ ಜೇನು ಸಾಕಾಣಿಕೆಯನ್ನು ಜನಪ್ರಿಯಗೊಳಿಸಿದ್ದರಲ್ಲದೆ, ಗಡಿನಾಡಿನಲ್ಲಿ ಕನ್ನಡಪರ ಸಂಘಟನೆ, ಸಹಕಾರಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ಭೂಸುಧಾರಣೆ ಕಾನೂನು ಅನುಷ್ಠಾನಕ್ಕೆ ಸ್ವಯಂ ಪ್ರೇರಿತರಾಗಿ ದುಡಿದಿದ್ದ ಮದನ್ ಮಾಸ್ತರ್ ಅವರು ಗಡಿನಾಡಿನಲ್ಲಿ ನೂರಾರು ಹಿಡುವಳಿದಾರರಿಗೆ ಜಮೀನು ಒದಗಿಸಿಕೊಡುವಲ್ಲಿ ಶ್ರಮಿಸಿದ್ದರು. ಖಾದಿ ಉಡುಪನ್ನಷ್ಟೇ ಧರಿಸುತ್ತಿದ್ದ ಮದನ ಮಾಸ್ತರ್ ಅವರು ಪ್ರಖರ ಗಾಂಧೀವಾದಿಯಾಗಿದ್ದರು.
ನೂರರ ಹರೆಯದಲ್ಲೂ ಸದಾ ಚಟುವಟಿಕೆಯಿಂದ ಇರುತ್ತಿದ್ದ ಮದನ ಮಾಸ್ತರ್ ಕೆಲವು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಅಸ್ವಸ್ಥಗೊಂಡಿದ್ದರು.
ಇತ್ತೀಚೆಗೆ ಹುಟ್ಟೂರ ಸನ್ಮಾನ ಸ್ವೀಕರಿಸಿದ್ದರು. ಅಲ್ಲದೆ ಕಳೆದ ಗಾಂಧಿ ಜಯಂತಿಯ ದಿನದಂದು ದ.ಕ.ಜಿಲ್ಲಾಡಳಿತವು ಕೆ.ಪಿ.ಮದನ ಮಾಸ್ತರ್ ಅವರನ್ನು ಮಂಗಳೂರು ಗಾಂಧಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿತ್ತು..







