ಆರೆಸ್ಸೆಸ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ ಪ್ರತಿಷ್ಠಿತ 51 ವಿವಿ ಉಪಕುಲಪತಿಗಳು!
.jpg)
ಹೊಸದಿಲ್ಲಿ, ಮಾ.28: ವಿವಿಧ ಕೇಂದ್ರೀಯ ಹಾಗೂ ರಾಜ್ಯ ವಿಶ್ವವಿದ್ಯಾನಿಲಯಗಳ 51 ಉಪಕುಲಪತಿಗಳೂ ಸೇರಿದಂತೆ 721ಕ್ಕೂ ಅಧಿಕ ಶಿಕ್ಷಣ ತಜ್ಞರು ರಾಜಧಾನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಭಾರತೀಯ ವಿಚಾರಧಾರೆಗಳತ್ತ ಭಾರತೀಯ ಶಿಕ್ಷಣವನ್ನು ಕೊಂಡೊಯ್ಯುವಲ್ಲಿ ಏನೇನೆಲ್ಲಾ ಮಾಡಬಹುದು ಎಂಬ ವಿಚಾರದ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚಿಸಲಾಗಿತ್ತು ಎಂಬ ಮಾಹಿತಿಯಿದೆ.
ಗ್ಯಾನ್ ಸಂಗಮ್ ಎಂಬ ಹೆಸರಿನ ಈ ಕಾರ್ಯಾಗಾರವನ್ನು ಆರೆಸ್ಸೆಸ್ ಪ್ರೇಷಿತ ಸಂಘಟನೆ ಪ್ರಜ್ಞಾ ಪ್ರವಾಹ್ ಆಯೋಜಿಸಿದ್ದರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕಾರ್ಯಾಗಾರದ ಮುಖ್ಯ ಭಾಷಣಕಾರರಾಗಿದ್ದರು.
ಭಾಗವಹಿಸಿದ್ದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ವೈ ಸುದರ್ಶನ್ ರಾವ್ ಸೇರಿದ್ದರು. ಭಾಗ್ವತ್ ಹೊರತಾಗಿ ಭಾಗವಹಿಸಿದ್ದ ಪ್ರಮುಖರಲ್ಲಿ ಆರೆಸ್ಸೆಸ್ ಸಹ ಕಾರ್ಯವಾಹ ಕೃಷ್ಣ ಗೋಪಾಲ್ ಮತ್ತು ಸುರೇಶ್ ಸೋನಿ ಸೇರಿದ್ದರು.
ಭಾರತೀಯ ವಿಚಾರಧಾರೆಯನ್ನು ಶಿಕ್ಷಣದಲ್ಲಿ ಒಳಪಡಿಸಲು ಇದೊಂದು ನಿಜವಾದ ಪ್ರಯತ್ನ ಎಂದು ಭಾಗ್ವತ್ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಹೇಳಿದ್ದರು. ಪ್ರಜ್ಞಾ ಪ್ರವಾಹ್ ಮುಖ್ಯಸ್ಥ ಜೆ.ನಂದಕುಮಾರ್ ಪ್ರಕಾರ ಭಾರತೀಯ ಶಿಕ್ಷಣದಲ್ಲಿ ಭಾರತೀಯತೆಯ ಕೊರತೆಯಿದೆ. ಶಿಕ್ಷಣ ಪಶ್ಚಿಮದತ್ತ ವಾಲಿದೆ ಎಂದು ಅವರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸರಕಾರವೇನೂ ಮಾಡಬೇಕಿಲ್ಲ ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಸರಕಾರದ ನಿಯಂತ್ರಣದಲ್ಲಿಲ್ಲ. ಸಮಾಜವೇ ಅದನ್ನು ನೋಡಿಕೊಳ್ಳಬೇಕು, ಎಂದಿದ್ದಾರೆ ನಂದಕುಮಾರ್.
ಸಾಂಸ್ಕೃತಿಕ ಆಕ್ರಮಣ ಎಂಬ ಹೆಸರಿನ ಅಧಿವೇಶನದಲ್ಲಿ ಸ್ವದೇಶಿ ಜಾಗರಣ್ ಮಂಚ್ ಇದರ ಸಂಚಾಲಕ ಎಸ್.ಗುರುಮೂರ್ತಿ ಭಾಗವಹಿಸಿದ್ದರೆ, ಅದರ ಅಧ್ಯಕ್ಷತೆಯನ್ನು ಬನಾರಸ್ ಹಿಂದೂ ವಿವಿಯ ಉಪಕುಲಪತಿ ಜಿ.ಸಿ.ತ್ರಿಪಾಠಿ ವಹಿಸಿದ್ದರು. ಬೌದ್ಧಿಕ ವಸಾಹತುಶಾಹಿ, ರಾಷ್ಟ್ರಭಕ್ತಿಯ ಪುರ್ನಜಾಗೃತಿ ಎಂಬ ವಿಚಾರದ ಬಗ್ಗೆ ಚರ್ಚೆಗಳೂ ನಡೆದಿದ್ದು ಹಲವು ಖ್ಯಾತ ಶಿಕ್ಷಣ ತಜ್ಞರು ಭಾಗವಹಿಸಿದ್ದರು.







