ಅರೆಬೆತ್ತಲೆ ಡ್ಯಾನ್ಸ್ ಪಾರ್ಟಿಯ ಮೇಲೆ ದಾಳಿ,13 ಜನರ ಸೆರೆ

ನಾಸಿಕ್,ಮಾ.28: ಜಿಲ್ಲೆಯ ಇಗತಪುರಿಯಲ್ಲಿನ ಐಷಾರಾಮಿ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಅರೆಬೆತ್ತಲೆ ಡ್ಯಾನ್ಸ್ ಪಾರ್ಟಿಯ ಮೇಲೆ ಸೋಮವಾರ ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು 13 ಯುವಕರು ಮತ್ತು ಯುವತಿಯರನ್ನು ಬಂಧಿಸಿದ್ದು, ಇವರಲ್ಲಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಂಬಂಧಿಗಳೂ ಸೇರಿದ್ದಾರೆ.
‘ಮಿಸ್ಟಿಕ್ ವಿಲ್ಲಾ ’ ಹೆಸರಿನ ಈ ಬಂಗಲೆಯ ಮೇಲೆ ಪೊಲೀಸ್ ದಾಳಿ ನಡೆದಾಗ 11 ಯುವಕರು ಮತ್ತು ಯುವತಿಯರು ಬಾಲಿವುಡ್ ಸಂಗೀತಕ್ಕೆ ಕುಣಿಯುತ್ತಿದ್ದರು. ಸಂಗೀತದ ಉಸ್ತುವಾರಿ ಹೊಂದಿದ್ದ ಡಿಜೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ಯುವತಿಯರು ತರಾತುರಿಯಲ್ಲಿ ಬಟ್ಟೆಗಳನ್ನು ಧರಿಸಿಕೊಳ್ಳತೊಡಗಿದ್ದರು.
ಪಾರ್ಟಿಯಲ್ಲಿ ಮಾದಕ ದ್ರವ್ಯ ಮತ್ತು ಮದ್ಯ ಧಾರಾಳವಾಗಿ ಬಳಕೆಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೋರ್ವ ತಿಳಿಸಿದ. ಐದು ಬಾಟ್ಲಿ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ಗಡೆ ಹಳದಿ ದೀಪವನ್ನು ಅಳವಡಿಸಲಾಗಿದ್ದ ಕಾರೊಂದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ನಂದೂರಬಾರ್‌ನ ಸಂಚಾರ ವಿಭಾಗದ ಎಸಿಪಿಯ ಪುತ್ರ, ನಾಗ್ಪುರ ಡಿಎಸ್‌ಪಿಯ ಸೋದರ ಪುತ್ರ, ಔರಂಗಾಬಾದ ಉಪ ವಿಭಾಗಾಧಿಕಾರಿಯ ಪುತ್ರ ಮತ್ತು ಥಾಣೆಯ ಹಿರಿಯ ಪಿಡಬ್ಲೂಡಿ ಅಧಿಕಾರಿಯ ಪುತ್ರ ಸೇರಿದ್ದಾರೆ. ಬಂಧನದ ವೇಳೆ ಓರ್ವ ಪರಾರಿಯಾಗಿದ್ದಾನೆ.
ಆರೋಪಿಗಳ ಪೈಕಿ ಓರ್ವ ಯುವತಿಯರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿ, 10,000 ರೂ.ಮುಂಗಡ ಪಾವತಿಸಿದ್ದ. ಉಳಿದ 90,000 ರೂ.ಗಳನ್ನು ಮರುದಿನ ನೀಡಬೇಕಿತ್ತು.
ಪೊಲೀಸರು ಬಂಧಿತರನ್ನು ಠಾಣೆಗೆ ಕರೆದೊಯ್ದ ಬೆನ್ನಿಗೇ ಮುಂಬೈ,ನಾಗ್ಪುರ ಮತ್ತು ಪುಣೆಯಿಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ದೂರವಾಣಿ ಕರೆಗಳು ಬರತೊಡಗಿದ್ದವು. ಆಗಲೇ ತಾವು ಯಾರನ್ನು ಬಂಧಿಸಿದ್ದೇವೆ ಎನ್ನುವುದು ಪೊಲೀಸರಿಗೆ ಗೊತ್ತಾಗಿದ್ದು.
ದಾಳಿಯನ್ನು ದೃಢಪಡಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಸಂಜಯ ಶುಕ್ಲಾ ಅ ವರು,ಸಂಘಟಕರು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.







