ಎಪ್ರಿಲ್‌ನಿಂದ ‘ಹಳ್ಳಿಗೊಬ್ಬ ಪೊಲೀಸ್’! - ದ.ಕ. ವ್ಯಾಪ್ತಿಯಲ್ಲಿ ಹೊಸ ‘ಗಸ್ತು ವ್ಯವಸ್ಥೆ’ ಜಾರಿ

ಮಂಗಳೂರು, ಮಾ. 28: ದಕ್ಷಿಣ ಕನ್ನಡ ಜಿಲ್ಲಾ ಪೊಲೀಲ್ ವ್ಯಾಪ್ತಿಯಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ಹಳ್ಳಿಗೊಬ್ಬ ಪೊಲೀಸ್ ಮಾದರಿಯಲ್ಲಿ ವಿನೂತನ ಗಸ್ತು ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ.
ಹಳ್ಳಿಗೊಬ್ಬ ಪೊಲೀಸ್ (ಹೆಡ್ ಕಾನ್‌ಸ್ಟೆಬಲ್ ಅಥವಾ ಕಾನ್‌ಸ್ಟೆಬಲ್) ತತ್ವದಡಿಯಲ್ಲಿ ಸ್ಥಳೀಯ ಜನರನ್ನೂ ಒಳಗೊಂಡ ಸಮಿತಿಯ ಉಸ್ತುವಾರಿಯಲ್ಲಿ ಜನಸ್ನೇಹಿ ಗಸ್ತು ವ್ಯವಸ್ಥೆ ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಭೂಷಣ್ ಜಿ.ಬೊರಸೆ ತಿಳಿಸಿದರು.
ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಆರಂಭದಲ್ಲಿಅವರು ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ 263 ಗಸ್ತು ವಲಯಗಳನ್ನು ಗುರುತಿಸಲಾಗಿದೆ. ಈ ಎಲ್ಲ ವಲಯಗಳಿಗೂ ತಲಾ ಒಬ್ಬ ಕಾನ್‌ಸ್ಟೆಬಲ್ ಉಸ್ತುವಾರಿಯಲ್ಲಿ ಗಸ್ತು ಸಮಿತಿಗಳನ್ನು ನೇಮಕ ಮಾಡಲಾಗುವುದು. ಏಪ್ರಿಲ್ ಕೊನೆಯ ವಾರದೊಳಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಕಾನ್‌ಸ್ಟೆಬಲ್ ಉಸ್ತುವಾರಿಯ ಗಸ್ತು ಸಮಿತಿಗೆ ಆ ಹಳ್ಳಿಯ 50 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುವುದು. ಅಲ್ಲಿ ವಾಸಿಸುವ ಎಲ್ಲ ಧರ್ಮದ ಹಾಗೂ ಎಲ್ಲ ಜಾತಿಯ ಜನರಿಗೆ ಅವರ ಸಂಖ್ಯೆಗೆ ಅನುಗುಣವಾಗಿ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಶೇಕಡ 30ರಷ್ಟು ಮಹಿಳೆಯರು ಈ ಸಮಿತಿಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಲಾಗುವುದು. ಎಲ್ಲ ಹಳ್ಳಿಗಳಲ್ಲೂ ಸಮಿತಿಯ ಸದಸ್ಯರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.







