ಬಲವಂತವಾಗಿ ಗೋ ಶಾಲಾ ಜಾನುವಾರುಗಳನ್ನು ಹೊರದಬ್ಬುತ್ತಿದ್ದಾರೆಯೇ ಇಲ್ಲಿನ ತಹಶೀಲ್ದಾರ್..?

ಗದಗ, ಮಾ.28: ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವಾಡುತ್ತಿರುವ ಸಮಯದಲ್ಲಿ ಸರಕಾರ ರೈತನ ಯಾತನೆ ನೋಡಲಾರದೆ ಗೋ ಶಾಲೆಗಳನ್ನು ತೆರೆದಿದೆ. ಆದರೆ ಈ ಗೋ ಶಾಲೆಯಲ್ಲಿ ಗೋವುಗಳ ಸರಣಿ ಸಾವು ಸದ್ಯ ಮುಗಿದಾಯಿತು. ಇದೀಗ ಬದುಕುಳಿದಿರುವ ಜಾನುವಾರುಗಳನ್ನು ಮನೆಗೆ ಒಯ್ಯಬೇಕಾದ ಪರಿಸ್ಥಿತಿ ರೈತರಿಗೆ ಬಂದೊದಗಿದೆ.

ಇದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗೋಶಾಲೆಯಲ್ಲಿ ನಡೆಯುತ್ತಿರುವ ಜಾನುವಾರುಗಳ ಗೋಳಾಟ. ಜಾನುವಾರುಗಳಿಗೆ ಕಾಯಿಲೆಯ ನೆಪವೊಡ್ಡಿ ಸ್ವತ: ತಹಶೀಲ್ದಾರ್ ಜಾನುವಾರುಗಳನ್ನು ಗೋಶಾಲೆಯಿಂದ ಹೊರಹಾಕಿ ದರ್ಪ ತೋರುತ್ತಿದ್ದಾರಂತೆ. ಸರಕಾರ ಒಂದು ಬಗೆದರೆ, ಅಧಿಕಾರಿಗಳು ಮತ್ತೊಂದು ಬಗೆಯುತ್ತಾರೆ ಅನ್ನೋದನ್ನು ಬೀದಿಗೆ ಬಿದ್ದ ರೈತರು ಆರೋಪಿಸುತ್ತಿದ್ದಾರೆ.

ಸರಕಾರ ಗೋಶಾಲೆ ತೆರೆದು ರೈತರ ನೆರವಿಗೆ ಧಾವಿಸಿದರೆ, ತಹಶೀಲ್ದಾರರಿಗೆ ಮಾತ್ರ ರೈತರ ಬವಣೆಯ ಗಂಭೀರತೆ ಗಮನಕ್ಕೆ ಬರುತ್ತಿಲ್ಲ. ಕಳೆದ ಮೂರು ದಿನದಿಂದ ಗೋಶಾಲೆಯಲ್ಲಿ ಗೋವುಗಳು ಸಾಯುತ್ತಿದ್ದರು ಕ್ರಮಕ್ಕೆ ಮುಂದಾಗದೆ ಗೋಶಾಲೆಯಲ್ಲಿ ಇರುವ ಜಾನುವಾರುಗಳನ್ನು ಮುಂಡರಗಿ ತಹಶೀಲ್ದಾರ್ ಬ್ರಮರಾಂಭ ರೈತರನ್ನು ಗದರಿಸಿ, ಸುಮಾರು 50 ಕ್ಕೂ ಹೆಚ್ಚು ಜಾನುವಾರುಗಳನ್ನು ಗೋಶಾಲೆಯಿಂದ ಹೊರಹಾಕಲಾಗಿದೆ ಅಂತ ರೈತ ನರೆಗಲ್ಲಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
.png)
ಗೋಶಾಲೆಗೆ ಹಾಕಿದ ಶೆಡ್ ನ ಸೆಕೆಯಿಂದ ಜಾನುವಾರು ಸಾಯುತ್ತಿರೋದರಿಂದ ಜಾನುವಾರು ಮನೆಗೆ ಒಯ್ಯುವಂತೆ ತಹಶೀಲ್ದಾರ್ ಒತ್ತಡ ಹೇರಿದ್ದಾರೆ. ಜಾನುವಾರುಗಳಿಗೆ ಕಾಯಿಲೆ ನೆಪವೊಡ್ಡಿ ಜಾನುವಾರು ಹೊರಹಾಕಲಾಗಿದ್ದು, ತಹಶೀಲ್ದಾರ್ ವರ್ತನೆಗೆ ಗೋವುಗಳ ಮಾಲಕರು ಹಾಗೂ ರೈತರು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಜಾನುವಾರುಗಳಿಗೆ ಚಿಕಿತ್ಸೆ ಕೊಡದೇ ಇದ್ದರೆ ಗೋಶಾಲೆಗಳಾದರು ಏಕೆ ಬೇಕು ಅನ್ನುವುದು ಇವರ ಪ್ರಶ್ನೆ.
ಗೋ ಶಾಲೆ ಅವ್ಯವಸ್ಥೆ ಆರೋಪ ಹಿನ್ನೆಲೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗೋಶಾಲೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ಭೇಟಿ ನೀಡಿದ್ದರು. ಭೇಟಿ ನಂತರ ಗೋಶಾಲೆ ಅವ್ಯವಸ್ಥೆ ದರ್ಶನಕ್ಕೆ ಸಂಕನೂರ ಕೆಂಡಾಮಂಡಲವಾದರು. ಜಾನುವಾರುಗಳ ಪಾಲನೆಯ ಅವ್ಯವಸ್ಥೆ ಕಂಡು ಎಮ್.ಎಲ್.ಸಿ ಗರಂ ಆದರು.
.png)
ಗೋಶಾಲೆಯಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಕೊಳೆತ ಮೇವು, ಹುಲ್ಲು ಕಂಡು ತಬ್ಬಿಬ್ಬಾಗಿದ್ದರು. ಸರಿಯಾದ ಆಹಾರವಿಲ್ಲದೇ ಸೊರಗಿದ ಗೋವು ಕಂಡ ಸಂಕನೂರ, ಮುಂಡರಗಿ ತಹಶೀಲ್ದಾರ್ ಬ್ರಮರಾಂಭಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಷ್ಟೆ ಅಲ್ಲ, ಎಮ್.ಎಲ್.ಸಿ ಎದುರೇ ತಹಶೀಲ್ದಾರರನ್ನು ರೈತರು ಸಹ ತರಾಟೆಗೆ ತೆಗೆದುಕೊಂಡ ಘಟನೆ ಮರುಕಳಿಸಿತು.
ಸತತ ಮೂರು ದಿನಗಳಿಂದ ಈ ಗೋಶಾಲೆಯ ಸಮಸ್ಯೆ ಮುಂದುವರೆದಿದ್ದು, ರೈತರ ಬದುಕು ಮಾತ್ರ ಮುರಾಬಟ್ಟೆ ಆದಂತಾಗಿದೆ. ಒಟ್ಟಿನಲ್ಲಿ ಆರೋಪ, ಪ್ರತ್ಯಾರೋಪದ ಹಿನ್ನಲೆಯಲ್ಲಿ ಮೂಕ ಪ್ರಾಣಿಗಳ ಆಕ್ರಂದನ ಮಾತ್ರ ಕೇಳುವವರಿಲ್ಲದಂತಾಗಿದೆ.
ಒಂದೆಡೆ ಗೋಶಾಲೆಯಿಂದ ಹೊರಹೋದು ಗೋವುಗಳ ಗೋಳಾಟ. ಮತ್ತೊಂದೆಡೆ ಗೋಶಾಲೆಯಲ್ಲಿನ ಗೋವುಗಳ ಸಂಕಷ್ಟ. ಈ ಮದ್ಯೆ ತಹಶೀಲ್ದಾರ್ ಮಾತ್ರ ಗೋವುಗಳು ಸಾಯುತ್ತಿರೋದ್ರಿಂದ ನಾನೇ ಗೋಶಾಲೆಯಿಂದ ಹೊರಹಾಕಿದ್ದೇನೆ ಅಂತ ಒಪ್ಪಿಕೊಳ್ಳುತ್ತಾರೆ.

ಸರಕಾರ ಗೋಶಾಲೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರು ಅಧಿಕಾರಿಗಳ ನಿರ್ಲಕ್ಷದಿಂದ ಜಾನುವಾರುಗಳು ಗೋಳಾಡುವಂತಾಗಿದೆ. ಬೇಸಿಗೆಯ ಬೇಗೆಯಲ್ಲಿ, ಬರದ ಬವಣೆಯಿಂದ ಜಾನುವಾರು ಸಾಕಾಣಿಕೆ ರೈತರಿಗೆ ಕಷ್ಟದ ಕೆಲಸವಾಗಿದೆ. ಇಂಥ ಸ್ಥಿತಿಯಲ್ಲಿ ಜಾನುವಾರು ಸಾಕೋದಾದರು ಹೇಗೆ? ಗೋಶಾಲೆಯಲ್ಲಿಯೇ ಗೋವು ಸಾಕದಿದ್ರೆ ನಮ್ಮ ದನಕರುಗಳ ಸ್ಥಿತಿ ಏನು.?
--ಸಾವಿತ್ರಿ, ರೈತ ಮಹಿಳೆ







