ಪತಂಜಲಿ ಮಾರಾಟ ಮಳಿಗೆಯ ಸೇಲ್ಸ್‌ಗರ್ಲ್ ಯುವಕನ ಗುಂಡೇಟಿಗೆ ಬಲಿ

ಗುರ್ಗಾಂವ್,ಮಾ.28: ಇಲ್ಲಿಯ ಪಾಮ್ ವಿಹಾರ್‌ನಲ್ಲಿಯ ಜನನಿಬಿಡ ಮಾರುಕಟ್ಟೆ ಯಲ್ಲಿರುವ ಪತಂಜಲಿ ಮಾರಾಟ ಮಳಿಗೆಯಲ್ಲಿ ಸೇಲ್ಸ್‌ಗರ್ಲ್ ಆಗಿ ಕೆಲಸ ಮಾಡುತ್ತಿದ್ದ 18ರ ಹರೆಯದ ಯುವತಿಯನ್ನು ಯುವಕನೋರ್ವ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಗುರ್ಗಾಂವ್ ಜಿಲ್ಲೆಯ ಚೌಮಾ ಗ್ರಾಮದ ನಿವಾಸಿ,ಮೂಲತಃ ಹರ್ಯಾಣದ ಜಝ್ಝರ್‌ನ ಪವನ್ ಕುಮಾರ್(28) ಎಂಬಾತ ಗುಂಜನ್ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿದ್ದು, ಕೆಲಸ ಮುಗಿಸಿಕೊಂಡು ಹೊರಬರುತ್ತಿದ್ದ ಆಕೆಯ ಮೇಲೆ ತೀರ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಆಕೆಯನ್ನು ತಕ್ಷಣವೇ ಸಮೀಪದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದಳು ಎಂದು ಎಸಿಪಿ ಜೈ ಸಿಂಗ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕುಮಾರ್ ಈ ಹಿಂದೆ ಹಲವಾರು ಬಾರಿ ತನ್ನ ಪುತ್ರಿಗೆ ಕಿರುಕುಳ ನೀಡಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತಾದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗುಂಜನ್‌ಳ ತಂದೆ ತಿಳಿಸಿದರು.
ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸಿಂಗ್ ಹೇಳಿದರು.