ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
ಅಮಿಟಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ

ಹೊಸದಿಲ್ಲಿ,ಮಾ.28: ಕಳೆದ ವರ್ಷದ ಅಮಿಟಿ ವಿವಿಯ ಕಾನೂನು ವಿದ್ಯಾರ್ಥಿ ಸುಷಾಂತ್ ರೊಹಿಲ್ಲಾ(20) ಆತ್ಮಹತ್ಯೆ ಪ್ರಕರಣದ ವಿಚಾರಣೆ ಯಿಂದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಎಸ್.ಸಿಸ್ತಾನಿ ಅವರು ಮಂಗಳವಾರ ಹಿಂದೆ ಸರಿದಿದ್ದಾರೆ. ತನ್ನ ಕುಟುಂಬದ ಸದಸ್ಯ ರೋರ್ವರು ಸದ್ರಿ ವಿವಿಯಲ್ಲಿ ಓದುತ್ತಿರುವುದು ತನ್ನ ಈ ನಿರ್ಧಾರಕ್ಕೆ ಕಾರಣವೆಂದಿರುವ ಅವರು, ಪ್ರಕರಣದ ವಿಚಾರಣೆಯನ್ನು ಬೇರೆ ಪೀಠಕ್ಕೆ ವಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ರೊಹಿಲ್ಲಾ ಆತ್ಮಹತ್ಯೆ ಕುರಿತಂತೆ ಈ ಹಿಂದೆ ಕಳವಳವನ್ನು ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳಾದ ಸಿಸ್ತಾನಿ ಮತ್ತು ವಿನೋದ್ ಗೋಯೆಲ್ ಅವರ ಪೀಠವು, ವಿದ್ಯಾರ್ಥಿ ಮತ್ತು ಆತನ ನಿಕಟರ್ತಿಗಳ ನಡುವೆ ಸಂವಹನದ ಕೊರತೆಯಿತ್ತೆಂಬಂತೆ ಕಂಡುಬರುತ್ತಿದೆ ಎಂದು ಹೇಳಿತ್ತು.
ತರಗತಿಗೆ ಹಾಜರಾತಿಯ ಕೊರತೆಯಿಂದಾಗಿ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿರಲಿಲ್ಲ ಎಂಬ ಕಾರಣಕ್ಕಾಗಿಯೇ ರೊಹಿಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದ ರೊಹಿಲ್ಲಾ 2016, ಆ.10ರಂದು ದಿಲ್ಲಿಯ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಅಮಿಟಿ ಅಧಿಕಾರಿಗಳೇ ರೊಹಿಲ್ಲಾನ ಆತ್ಮಹತ್ಯೆಗೆ ಕಾರಣ ಎಂದು ದೂರಿ ಮೃತನ ಆಪ್ತಸ್ನೇಹಿತ ಹಾಗೂ ನಾಲ್ಕನೆಯ ವರ್ಷದ ಕಾನೂನು ವಿದ್ಯಾರ್ಥಿ ರಾಘವ ಶರ್ಮಾ ಆಗಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಅವರಿಗೆ ಬರೆದಿದ್ದ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು, ರೊಹಿಲ್ಲಾ ಆತ್ಮಹತ್ಯೆಗೆ ಕಿರುಕುಳ ಕಾರಣವಾಗಿರಬಹುದೆಂಬ ಶಂಕೆಯ ಕುರಿತು ತಾನು ಪರಿಶೀಲಿಸುವುದಾಗಿ ಹೇಳಿತ್ತಾದರೂ, ಬಳಿಕ ಆ ವಿಷಯವನ್ನು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.