ಮನಪಾ ಮೇಯರ್‌ರಿಂದ ಮುಖ್ಯಮಂತ್ರಿ ಭೇಟಿ: ಮನವಿ ಸಲ್ಲಿಕೆ
.jpg)
ಮಂಗಳೂರು, ಮಾ. 28: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಹಾಗೂ ಶಾಸಕ ಜೆ.ಆರ್. ಲೋಬೋ ಅವರ ಉಪಸ್ಥಿತಿಯಲ್ಲಿ ಮೇಯರ್ ಕವಿತಾ ಸನಿಲ್ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರ ನಿಯೋಗವೊಂದು ಮಂಗಳವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಗರೋತ್ಥಾನ ಯೋಜನೆಯಡಿ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ 3ನೆ ಹಂತದ 100 ಕೋಟಿ ರೂ. ಹಣ ಮಂಜೂರಾಗಿದ್ದು, ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಹಲವಾರು ಕಾಮಗಾಇರಗಳು ಆರ್ಥಿಕ ಕೊರತೆಯಿಂದ ಅಪೂರ್ಣವಾಗಿವೆ. ಈ ಕಾಮಗಾರಿಗಳನು ಪೂರ್ಣಗೊಳಿಸಲು ಹಾಗೂ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು 4ನೆ ಹಂತದ 100 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಬೇಕು. ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ನೂತನ ಕಿಂಡಿ ಅಣೆಕಟ್ಟಿನ ಎತ್ತರವನ್ನು 7 ಮೀಟರ್‌ಗೆ ಹೆಚ್ಚಿಸಿದ ಕಾರಣ ಹಿನ್ನೀರಿನಲ್ಲಿ ಸುಮಾರು 500 ಎಕರೆ ರೈತರ ಕೃಷಿ ಭೂಮಿ ಮುಳುಗಡೆಯಾಗಲಿದೆ. ಸಂತ್ರಸ್ತ ರೈತರಿಗೆ ಸಂಪೂರ್ಣ ಪರಿಹಾರ ನೀಡಲು ಅಗತ್ಯ ಅನುದಾನವನ್ನು ನೀಡಬೇಕು ಎಂದು ಮನವಿಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗಿದೆ.
ಮನಪಾದ ಹಿರಿಯ ಸದಸ್ಯರಾದ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಸದಸ್ಯರಾದ ವಿನಯ್‌ರಾಜ್, ಪ್ರವೀಣ್ ಚಂದ್ರ ಆಳ್ವ ಹಾಗೂ ಇತರರು ಉಪಸ್ಥಿತರಿದ್ದರು.





