ಭ್ರೂಣಲಿಂಗ ಪತ್ತೆ ಕಾಯಿದೆ ಪರಿಣಾಮಕಾರಿ ಅನುಷ್ಠಾನ: ಜಿಲ್ಲಾಧಿಕಾರಿ

ಉಡುಪಿ, ಮಾ.28: ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಗಣ ನೀಯ ಮಟ್ಟದಲ್ಲಿ ಕಡಿಮೆಯಾಗಿದ್ದು, ಜಿಲ್ಲಾ ಮಟ್ಟದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯ ಬೇಕೆಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಮಂಗಳ ವಾರ ನಡೆದ ಜಿಲ್ಲಾ ಮಟ್ಟದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಜಿಲ್ಲಾ ಸಲಹಾ ಸಮಿತಿ ಸಭೆೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು. ಕಾಯಿದೆ ಜಾರಿ ಖಾತರಿಗೆ ಹಾಗೂ ಈಗಿರುವ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತಡೆಯಲು ತಾಂತ್ರಿಕತೆಯ ನೆರವು ಪಡೆಯುವ ಬಗ್ಗೆ ಚಿಂತಿಸ ಬೇಕು ಎಂದು ಜಿಲ್ಲಾಧಿಕಾರಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸ ಸಲಹಾ ಸಮಿತಿಯನ್ನು ರಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
2016ರ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಜಿಲ್ಲಾ ಸಮಿತಿ ಸಭೆ ನಡೆದಿದ್ದು, ಆ ಬಳಿಕ ಒಟ್ಟು 27 ಸಂಸ್ಥೆಗಳ ನವೀಕರಣ ಮತ್ತು 2 ಹೊಸ ನೊಂದಾವಣೆ ಮಾಡಲಾಗಿದೆ. ಒಟ್ಟು ಉಡುಪಿ ಜಿಲ್ಲೆಯಲ್ಲಿ 71 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಉಡುಪಿ ತಾಲೂಕಿ ನಲ್ಲಿ 40, ಕುಂದಾಪುರದಲ್ಲಿ 20, ಕಾರ್ಕಳದಲ್ಲಿ 11 ಇವೆ. ಇದಲ್ಲದೆ ಮಣಿಪಾಲದಲ್ಲಿ ಜೆನೆಟಿಕ್ ಲ್ಯಾಬ್ ಒಂದು ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ನೋಂದಾಯಿಸಿ, ನವೀಕರಿಸಿದ ಆಸ್ಪತ್ರೆಗಳಲ್ಲಿರುವ ಯಂತ್ರಗಳ ಮಾಹಿತಿ ಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ನೀಡಿದರು. ಹೊಸ ಯಂತ್ರಗಳಿಗೂ ಅನುಮತಿಯ ಅಗತ್ಯವಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ಉಪಸ್ಥಿತರಿದ್ದರು.







