ಉತ್ತರಪ್ರದೇಶ ಮುಷ್ಕರದ ಬಿಸಿ : ಮಾಂಸಕ್ಕೆ ಬರ
.jpg)
ಹೊಸದಿಲ್ಲಿ, ಮಾ.28: ನೆರೆಯ ರಾಜ್ಯವಾದ ಉತ್ತರಪ್ರದೇಶದಲ್ಲಿ ಮಾಂಸಮಾರಾಟಗಾರರ ಮುಷ್ಕರದ ಬಿಸಿಯು ರಾಷ್ಟ್ರದ ರಾಜಧಾನಿ ದಿಲ್ಲಿಗೂ ತಟ್ಟಿದ್ದು ಮಾಂಸದ ಪೂರೈಕೆಯಲ್ಲಿ ತೀವ್ರ ಅಭಾವ ಉಂಟಾಗಿದೆ.
ಉತ್ತರಪ್ರದೇಶದಿಂದ ದಿಲ್ಲಿಯ ಮಾಂಸದ ಮಾರುಕಟ್ಟೆಗೆ ಆಡುಗಳ ಪೂರೈಕೆ ಸಂಪೂರ್ಣವಾಗಿ ನಿಂತುಹೋಗಿದೆಯೆಂದು ಗಾಝಿಯಾಪುರ್‌ನ ರಖಂ ಮಾಂಸದ ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೈಸೆನ್ಸ್ ಹೊಂದಿದ ಉದ್ಯಮಿಗಳು ಕೂಡಾ ಸಂಘಪರಿವಾರದ ಬೆಂಬಲಿಗರ ದಾಳಿಯ ಭೀತಿಯಿಂದ ಆಡುಗಳನ್ನು ಪೂರೈಕೆ ಮಾಡಲು ಹೆದರುತ್ತಿದ್ದಾರೆಂದು ರಖಂ ಮಾಂಸ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಆದಾಗ್ಯೂ ಭಾರತೀಯ ಹೊಟೇಲ್ ಹಾಗೂ ರೆಸ್ಟಾರೆಂಟ್ ಅಸೋಸಿಯೇಶನ್‌ಗಳ ಒಕ್ಕೂಟದ ಉಪಾಧ್ಯಕ್ಷ ಗರೀಶ್ ಒಬೆರಾಯ್ ಅವರು, ಉತ್ತರಪ್ರದೇಶದಲ್ಲಿ ಮಾಂಸ ವ್ಯಾಪಾರಿಗಳ ಮುಷ್ಕರವು ಹೊಟೇಲ್ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲವೆಂದು ಹೇಳಿದ್ದಾರೆ. ಆದರೆ, ಎಮ್ಮೆಯ ಮಾಂಸದ ಪೂರೈಕೆ ಮಾತ್ರ ತೀವ್ರವಾಗಿ ಬಾಧಿತವಾಗಿದೆಯೆಂದು ಅವು ಒಪ್ಪಿಕೊಂಡಿದ್ದಾರೆ.
ಒಂದು ವೇಳೆ ಉತ್ತರಪ್ರದೇಶದಲ್ಲಿ ಮುಷ್ಕರ ಮುಂದುವರಿದಲ್ಲಿ, ಮಾಂಸ ಬೆಲೆ ಗಗನಕ್ಕೇರಲಿದೆಯೆಂದು ಪೂರ್ವದಿಲ್ಲಿಯ ಗಾಝಿಯಾಪುರ್ ಮಂಡಿಯ ಮಾಂಸ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯ ಆಸುಪಾಸಿನಲ್ಲಿ ಜಾನುವಾರು ಫಾರ್ಮ್‌ಗಳಿಲ್ಲದಿರುವುದರಿಂದ ನಗರವು ಮಾಂಸ ಪೂರೈಕೆಗಾಗಿ ಉತ್ತರಪ್ರದೇಶ,ಪಂಜಾಬ್, ರಾಜಸ್ಥಾನ ಹಾಗೂ ಹರ್ಯಾಣ ರಾಜ್ಯಗಳನ್ನು ಸಂಪೂರ್ಣವಾಗಿ ಅವಲಂಭಿಸಿದೆ. ಈ ಮೊದಲು ಉತ್ತರಪ್ರದೇಶದಿಂದ ಪ್ರತಿ ದಿನವೂ ಸುಮಾರು 20 ಟ್ರಕ್ ಲೋಡ್‌ನಷ್ಟು ಆಡುಗಳು ಗಾಝಿಪುರ್ ಮಂಡಿಗೆ ಬರುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶದ ಅಡುಗಳ ಪೂರೈಕೆಯಾಗುತ್ತಿಲ್ಲವೆಂದು ಅವರು ಹೇಳಿದ್ದಾರೆ.
ಅನಧಿಕೃತ ಹಾಗೂ ಯಾಂತ್ರಿಕೃತ ಕಸಾಯಿಖಾನೆಗಳ ಮುಚ್ಚುಗಡೆಯನ್ನು ವಿರೋಧಿಸಿ ಉತ್ತರಪ್ರದೇಶದ ಮಾಂಸ ವ್ಯಾಪಾರಿಗಳು ಸೋಮವಾರದಿಂದ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ.