30ರಂದು ಬಂದ್ ಕರೆ ಹಿನ್ನೆಲೆ: ಬಸ್ ಸಂಚಾರ ಸ್ಥಗಿತ ಇಲ್ಲ; ಪರ್ತಿಪಾಡಿ
ಮಂಗಳೂರು, ಮಾ. 28: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸೌತ್ ರೆನ್, ಟ್ರಾನ್ಸ್‌ಪೋರ್ಟ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಇತರ ಖಾಸಗಿ ವಾಹನಗಳ ಸಂಘಟನೆಗಳು ಮಾ. 30ರಂದು ಕರೆ ಕೊಟ್ಟಿರುವ ಮುಷ್ಕರಕ್ಕೆ ದ.ಕ. ಬಸ್ ಮಾಲಕರ ಸಂಘವು ಪರೋಕ್ಷ ಬೆಂಬಲ ನೀಡಲಿದೆ ಎಂದು ಹೇಳಿರುವ ಸಂಘದ ಅಧ್ಯಕ್ಷ ಅಜೀಝ್ ಪರ್ತಿಪಾಡಿ, ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಮಾ.30ರಂದು ಬಸ್ಸು ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಆಗುವ ಸಂಸ್ಯೆಯನ್ನು ಪರಿಗಣಿಸಿ ಮಾ.30ರಂದು ದ.ಕ. ಬಸ್ ಮಾಲಕರ ಸಂಘದ ಎಲ್ಲಾ ಬಸ್ಸುಗಳು ಎಂದಿನಂತೆ ಸಂಚಾರ ನಡೆಸಲಿದೆ. ಆದರೆ, ಮುಷ್ಕರವನ್ನು ಬೆಂಬಲಿಸಿ ದ.ಕ. ಬಸ್ಸು ಮಾಲಕರ ಸಂಘದ ಪ್ರತಿಯೊಬ್ಬ ಮಾಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡೀಸೆಲ್ ದರ ಏರಿಕೆ, ಬಿಡಿಭಾಗಗಳು, ಟೈರುಗಳು ಸಹಿತ ಇತರ ತೆರಿಗೆ ಹೆಚ್ಚಳ ಸೇರಿದಂತೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಪ್ರೀಮಿಯಂ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಖಾಸಗಿಯವರಿಗೆ ಬಸ್ಸು ಓಡಿಸುವುದೇ ಕಷ್ಟಕರವಾಗಿದೆ. ಆದ್ದರಿಂದ ಎಲ್ಲಾ ವಸ್ತುಗಳ ಮೇಲಿನ ಹೆಚ್ಚಳವನ್ನು ಸರಕಾರ ಕೂಡಲೇ ಇಳಿಸಬೇಕೆಂದು ಅಜೀಝ್ ಪರ್ತಿಪಾಡಿ ಪ್ರಟನೆಯಲ್ಲಿ ಒತ್ತಾಯಿಸಿದ್ದಾರೆ.





