‘ಇಂದಿರಾ ಕ್ಯಾಂಟೀನ್’ಗಳ ಕಾರ್ಯಾರಂಭ: ಮುಖ್ಯಮಂತ್ರಿ

ಬೆಂಗಳೂರು, ಮಾ.28: ಬಡವರು, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉತ್ತಮವಾದ ಆಹಾರವನ್ನು ಪೂರೈಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ‘ನಮ್ಮ ಕ್ಯಾಂಟೀನ್’ಗಳು ಕಾರ್ಯಾರಂಭ ಮಾಡಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ 2017-18ನೆ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ನಮ್ಮ ಕ್ಯಾಂಟೀನ್ ಕುರಿತು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು ಇಂದಿರಾ ಕ್ಯಾಂಟೀನ್ ಎಂದು ಕೂಗಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲಿ ಈ ಕ್ಯಾಂಟೀನ್‌ಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಈ ಯೋಜನೆಯ ಆದೇಶವನ್ನು ಜಾರಿ ಮಾಡುವಾಗ ಇಂದಿರಾ ಕ್ಯಾಂಟೀನ್ ಎಂದು ಹೆಸರು ಬದಲಾಯಿಸಿ ಆದೇಶ ಹೊರಡಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಯೋಜನೆಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಸರು ಇಡುವಂತೆ ಸರ್ವಾನುಮತದ ಸಲಹೆ ಬಂದಿದೆ. ಆದುದರಿಂದ, ಈ ಸಂಬಂಧ ಆದೇಶ ಹೊರಡಿಸುವಾಗ ಯೋಜನೆಯ ಹೆಸರನ್ನು ಬದಲಾಯಿಸುತ್ತೇವೆ ಎಂದು ಅವರು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ 198 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರು ನಗರಕ್ಕೆ ಒಂದು ದಿನಕ್ಕೆ ಕನಿಷ್ಠ 20 ಲಕ್ಷ ಜನ ಪ್ರವಾಸಿಗರು ಬಂದು ಹೋಗುತ್ತಾರೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ರಿಯಾಯಿತಿ ದರದಲ್ಲಿ ಊಟವನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.







