ವಿಶ್ವಸಂಸ್ಥೆಯ ಪರಮಾಣು ನಿಶ್ಶಸ್ತ್ರೀಕರಣ ಸಮ್ಮೇಳನದಿಂದ ಭಾರತ ದೂರ
ಜಿನೇವ ನಿಶ್ಶಸ್ತ್ರೀಕರಣ ಸಮ್ಮೇಳನಕ್ಕೆ ಭಾರತ ಒಲವು

ವಿಶ್ವಸಂಸ್ಥೆ, ಮಾ. 28: ಪರಮಾಣು ಶಸ್ತ್ರಗಳ ಜಾಗತಿಕ ನಿಷೇಧದ ಬಗ್ಗೆ ಚರ್ಚಿಸುವುದಕ್ಕಾಗಿ 20 ವರ್ಷಗಳಿಗೂ ಅಧಿಕ ಅವಧಿಯಲ್ಲಿ ನಡೆಯುತ್ತಿರುವ ಪ್ರಥಮ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾರತ ಭಾಗವಹಿಸುವುದಿಲ್ಲ.
ಪ್ರಮುಖ ಪರಮಾಣು ಶಕ್ತ ದೇಶಗಳ ವಿರೋಧದ ನಡುವೆಯೇ ಸಮ್ಮೇಳನ ಸೋಮವಾರ ಆರಂಭಗೊಂಡಿದೆ.
ಪರಮಾಣು ಅಸ್ತ್ರಗಳನ್ನು ನಿಷೇಧಿಸುವ ಮತ್ತು ಹಂತ ಹಂತವಾಗಿ ಸಂಪೂರ್ಣವಾಗಿ ನಿರ್ಮೂಲಗೊಳಿಸುವ ಹಾಗೂ ಪಾಲಿಸುವುದು ಕಡ್ಡಾಯವಾಗಿರುವ ಒಪ್ಪಂದವೊಂದರ ಬಗ್ಗೆ ಚರ್ಚಿಸಲು ಸಮ್ಮೇಳನವೊಂದನ್ನು ಏರ್ಪಡಿಸಬೇಕೆಂಬ ನಿರ್ಣಯವನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ 120ಕ್ಕೂ ಅಧಿಕ ದೇಶಗಳು ಅಂಗೀಕರಿಸಿದ್ದವು.
ಬ್ರಿಟನ್, ಫ್ರಾನ್ಸ್, ಇಸ್ರೇಲ್, ರಶ್ಯ ಮತ್ತು ಅಮೆರಿಕಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದರೆ, ಭಾರತ, ಚೀನಾ ಮತ್ತು ಪಾಕಿಸ್ತಾನಗಳು ಮತದಾನದಿಂದ ದೂರವುಳಿದಿದ್ದವು.
ಜಾಗತಿಕ ಸಮುದಾಯ ಬಯಸುವ ಸಮಗ್ರ ಪರಮಾಣು ನಿಶ್ಶಸ್ತ್ರೀಕರಣವನ್ನು ಈ ಸಮ್ಮೇಳನ ಸಾಧಿಸುವ ಬಗ್ಗೆ ತನಗೆ ಮನದಟ್ಟಾಗಿಲ್ಲ ಎಂಬುದಾಗಿ ಭಾರತ ಅಕ್ಟೋಬರ್‌ನಲ್ಲಿ ತನ್ನ ಅನುಪಸ್ಥಿತಿಗೆ ಕಾರಣವನ್ನು ನೀಡಿತ್ತು.
ಜಿನೇವದಲ್ಲಿರುವ ನಿಶ್ಶಸ್ತ್ರೀಕರಣ ಸಮ್ಮೇಳನವೊಂದೇ ಬಹುಪಕ್ಷೀಯ ನಿಶ್ಶಸ್ತ್ರೀಕರಣ ಮಾತುಕತೆ ವೇದಿಕೆಯಾಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ನಿಶ್ಶಸ್ತ್ರೀಕರಣ ಸಮ್ಮೇಳನದಲ್ಲಿ ಪರಮಾಣು ನಿಶ್ಶಸ್ತ್ರೀಕರಣದ ಬಗ್ಗೆ ಚರ್ಚೆ ಆರಂಭಗೊಳ್ಳುವುದನ್ನು ತಾನು ಬೆಂಬಲಿಸುವುದಾಗಿ ಭಾರತ ಹೇಳಿದೆ. ಈ ಚರ್ಚೆಯು ನಿಷೇಧ ಮತ್ತು ನಿರ್ಮೂಲನದ ಜೊತೆಗೆ ಪರಿಶೀಲನೆಯನ್ನೂ ಒಳಗೊಂಡಿದೆ.
ಜಾಗತಿಕ ಪರಮಾಣು ಶಸ್ತ್ರಗಳ ನಿಶ್ಶಸ್ತ್ರೀಕರಣದ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪರಿಶೀಲನೆ ಮಹತ್ವದ್ದಾಗಿದೆ ಎಂದು ಭಾರತ ಹೇಳಿತ್ತು. ಹಾಲಿ ಪ್ರಕ್ರಿಯೆಯಲ್ಲಿ ಪರಿಶೀಲನೆಯ ಅಂಶವಿಲ್ಲ ಎಂಬುದಾಗಿ ಭಾರತ ಅಭಿಪ್ರಾಯಪಟ್ಟಿದೆ.
ನಿರ್ಣಯ ಅಂಗೀಕಾರದ ಸಮಯದಲ್ಲಿ ಭಾರತ ತಳೆದ ನಿಲುವಿಗೆ ಅನುಗುಣವಾಗಿ, ಹಾಲಿ ಸಮ್ಮೇಳನದಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿದೆ. ಪ್ರಸಕ್ತ ಸಮ್ಮೇಳನ ಮಾರ್ಚ್ 31ರವರೆಗೆ ನಡೆಯಲಿದೆ.







