ಪುತ್ತೂರು ನಗರಕ್ಕೆ 3 ತಿಂಗಳು ನೀರಿನ ಸಮಸ್ಯೆಯಿಲ್ಲ: ಅಧ್ಯಕ್ಷೆ ಜಯಂತಿ ಬಲ್ನಾಡು

ಪುತ್ತೂರು, ಮಾ.28: ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನಲ್ಲಿ 3 ಮೀ. ಎತ್ತರ ನೀರು ತುಂಬಿಕೊಂಡಿದ್ದು, ಮುಂದಿನ ಮೂರು ತಿಂಗಳಿಗೆ ನಗರಕ್ಕೆ ಬೇಕಾಗುಷ್ಟು ನೀರು ಸಂಗ್ರಹದಲ್ಲಿದೆ. ಈ ಬಾರಿ ನಗರಕ್ಕೆ ನೀರಿನ ಸಮಸ್ಯೆಯಾಗದು ಎಂದು ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.
ಅವರು ಮಂಗಳವಾರ ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಹಾಗೂ ರೇಚಕ ಯಂತ್ರ ಸ್ಥಾವರಕ್ಕೆ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನದಿಯಲ್ಲಿ ಪ್ರಸ್ತುತ ಒಳಹರಿವು ಉತ್ತಮವಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಗೆ ಶೇ.60ರಷ್ಟು ನೀರು ಪೂರೈಕೆ ಮಾಡುವ ನೆಕ್ಕಿಲಾಡಿ ಡ್ಯಾಂನಲ್ಲಿ 3 ಮೀಟರ್ ಎತ್ತರ ನೀರು ಶೇಖರಣೆಯಾಗಿದೆ. ಇದು ಕಡಿಮೆಯಾದರೆ ಡ್ಯಾಂಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಿರು ನೀರು ಯೋಜನೆಯ 144 ಕೊಳವೆ ಬಾವಿಗಳು ಇವೆ. ಇವುಗಳ ಮೂಲಕ ಶೇ.40ರಷ್ಟು ಫಲಾನುಭವಿಗಳಿಗೆ ನೀರು ಒದಗಿಸಲಾಗುತ್ತಿದೆ. 22 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ 6 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ವಿತರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಸಂದರ್ಭ ನೀರಿನ ಕುರಿತು ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಪ್ರತಿಯೊಬ್ಬ ಜನಪ್ರತಿನಿಧಿಯೂ ನೀರಿನ ಕುರಿತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ. ಕಳೆದ ಬಾರಿ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾದಾಗ ತುಂಬೆ ಡ್ಯಾಂಗೆ ನೆಕ್ಕಿಲಾಡಿ ಡ್ಯಾಂನಿಂದ ನೀರು ಹರಿಸಲಾಗಿತ್ತು. ಪರಿಸ್ಥಿತಿಯನ್ನು ನೋಡಿ ಈ ಅನುಮತಿ ನೀಡಲಾಗಿತ್ತು. ಈ ಬಾರಿ ನೀರು ಕೇಳಿದರೆ ಒಳಹರಿವು ಪ್ರಮಾಣ ಹಾಗೂ ಇಲ್ಲಿನ ಪರಿಸ್ಥಿತಿಯನ್ನು ವಿಮರ್ಶಿಸಿ ಕೊಡುವುದೋ, ಬೇಡವೋ ಎಂಬ ಕುರಿತು ನಿರ್ಧರಿಸಲಾಗುವುದು. ತೀರಾ ಕಷ್ಟಕರ ಪರಿಸ್ಥಿತಿಯಿದ್ದರೆ ನೀರು ಹರಿಸಲು ನಿರಾಕರಿಸಲಾಗುವುದು ಎಂದು ಅಧ್ಯಕ್ಷೆ ಜಯಂತಿ ಬಲ್ನಾಡು ಸ್ಪಷ್ಟ ಪಡಿಸಿದರು.
ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ ವಿದ್ಯುತ್ ಸಂಪರ್ಕ ಕೇಳಿದ ಸಂದರ್ಭ ಮೆಸ್ಕಾಂ ಅಧಿಕಾರಿಗಳು ಅಸಹಕಾರ ತೋರುತ್ತಿದ್ದಾರೆ. ಇದರಿಂದ ಕೆಲಸಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಮೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ವಿಚಾರಕ್ಕಾಗಿ ಸಹಕಾರ ನೀಡಬೇಕಾಗಿದೆ. ನಗರಸಭೆಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲು ಸಿದ್ಧರಿರುವ ವಹಿಸಿರುವ ಸಿಬ್ಬಂದಿಗಳಿದ್ದಾರೆ. ಅವರ ಉಸ್ತುವಾರಿಯಲ್ಲಿಯೇ ನೀರು ಸರಬರಾಜು ಕೆಲಸ ಯಾವುದೇ ಸಮಸ್ಯೆಗಳಿಲ್ಲದೆ ನಿರಂತರ ನಡೆಯುತ್ತಿದೆ. ಮೆಸ್ಕಾಂ ಸಹಕಾರ ನೀಡಿದರೆ ಎಲ್ಲಾ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ ಎಂದು ಹೇಳಿದರು.
ನಗರಸಭಾ ವ್ಯಾಪ್ತಿಯಲ್ಲಿ ಕೆಲವು ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವಲ್ಲಿಗೆ ಒಂದೂವರೆ ತಿಂಗಳಿನಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೆಬ್ಬಾರಬೈಲು, ಜಿಡೆಕಲ್ಲು, ಬಲ್ನಾಡುಪದವು, ತಾರಿಗುಡ್ಡೆ, ರೋಟರಿಪುರ, ಕೆಮ್ಮಾಯಿಪದವು, ಮಚ್ಚಿಮಲೆ, ಮರೀಲ್ ಕೂರ್ನಡ್ಕ, ದರ್ಬೆ ಹಳೆ ಡಿವೈಎಸ್ಪಿ ಕಚೇರಿ ಹಿಂದೆ, ಬನ್ನೂರು ಶಾಲೆ ಬಳಿ, ಗೋಳಿಕಟ್ಟೆ ಕುಲಾಲ್ ರಸ್ತೆ, ಬೆದ್ರಾಳ ನೆಕ್ಕರೆ ಪರಿಸರ ಸೇರಿದಂತೆ ಸುಮಾರು 20 ಕಡೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 2-3 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲೂ ನಗರಸಭೆ ಸಿದ್ಧವಿದೆ ಎಂದು ಮಹಮ್ಮದ್ ಆಲಿ ಹೇಳಿದರು.
ಈ ಸಂದರ್ಭ ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ, ಅನ್ವರ್ ಖಾಸಿಂ, ಮುಖೇಶ್ ಕೆಮ್ಮಿಂಜೆ, ನೀರಿನ ವಿಭಾಗ ಮೇಲ್ವಿಚಾರಕ ವಸಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







