ಸೋದರ ಸಂಬಂಧಿಗಳ ಬಂಧಿಸಿ, ಬಿಡುಗಡೆಗೆ ಲಂಚ ಪಡೆದ ಪೊಲೀಸರ ಅಮಾನತು
ರೋಮಿಯೊ ವಿರೋಧಿ ಕಾರ್ಯಾಚರಣೆ
ಲಕ್ನೋ,ಮಾ.28: ರೋಮಿಯೊ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ಓರ್ವ ಯುವಕ ಹಾಗೂ ಆತನ ಸೋದರ ಸಂಬಂಧಿಕಳನ್ನು ವಶಕ್ಕೆ ತೆಗೆದುಕೊಂಡು ಕಿರುಕುಳ ನೀಡಿದ ಮತ್ತು ಅವರ ಬಿಡುಗಡೆಗಾಗಿ ಲಂಚ ಸ್ವೀಕರಿಸಿದ ಉತ್ತರಪ್ರದೇಶದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಹಶ್ಮತ್ ಗಂಜ್ ಗ್ರಾಮದ ನಿವಾಸಿಗಳಾದ ಯುವಕ ಹಾಗೂ ಆತನ ಚಿಕ್ಕಪ್ಪನ ಮಗಳು (ಇಬ್ಬರೂ 18 ವರ್ಷ ವಯಸ್ಸಿನವರು) ಔಷಧಿ ಖರೀದಿಸಲೆಂದು ಮಾರ್ಚ್ 26ರಂದು ರಾಮ್‌ಪುರಕ್ಕೆ ಬಂದಿದ್ದಾಗ ಅವರನ್ನು ಸಬ್‌ಇನ್ಸ್‌ಪೆಕ್ಟರ್ ಸಂಜೀವ್ ಗಿರಿ ಹಾಗೂ ಕಾನ್‌ಸ್ಟೇಬಲ್ ವಿಮಲ್ ವಶಕ್ಕೆ ತೆಗೆದುಕೊಂಡಿದ್ದರು.ರೋಮಿಯೊ ವಿರೋಧಿ ಕಾರ್ಯಾಚರಣೆಯಡಿ ಅವರನ್ನು ಬಂಧಿಸಿರುವುದಾಗಿ ತಿಳಿಸಿದರು. ಸುಮಾರು ಐದು ತಾಸುಗಳವರೆಗೆ ಅವರನ್ನು ಠಾಣೆಯಲ್ಲಿರಿಸಿದ್ದರು.
ಸುದ್ದಿ ತಿಳಿದು ಠಾಣೆಗೆ ಧಾವಿಸಿ ಬಂದ ಅವರ ಬಂಧುಗಳು, ಇಬ್ಬರೂ ಪರಸ್ಪರ ಸಂಬಂಧಿಗಳೆಂದು ತಿಳಿಸಿದರೂ, ಪೊಲೀಸರು ಅವರನ್ನು ಬಿಡುಗಡೆಗೆ ಒಪ್ಪಲಿಲ್ಲ. 5 ಸಾವಿರ ರೂ. ನೀಡಿದಲ್ಲಿ ಮಾತ್ರ ಬಿಡುಗಡೆಗೊಳಿಸುವುದಾಗಿ ಬೇಡಿಕೆ ಯೊಡ್ಡಿದರು. ವಿಧಿಯಿಲ್ಲದೆ ಬಂಧುಗಳು ಹಣ ನೀಡಿದರು. ಇದರ ಜೊತೆಗೆ ಪೊಲೀಸರು ಲಂಚ ಸ್ವೀಕರಿಸುತ್ತಿರುವುದನ್ನು ರಹಸ್ಯವಾಗಿ ಚಿತ್ರೀಕರಿಸಿದರು.
ಆನಂತರ ಅವರು ಸ್ಥಳೀಯ ಶಾಸಕ ಬಲ್‌ದೇವ್ ಸಿಂಗ್ ಔಲಾಖ್‌ಗೆ ದೂರು ನೀಡಿದಾಗ ಅವರು ಈ ಬಗ್ಗೆ ಎಸ್ಪಿಗೆ ಮಾಹಿತಿ ನೀಡಿದರು. ವಿಡಿಯೋ ಪರಿಶೀಲಿಸಿದ ಪೊಲೀಸ್ ಎಸ್ಪಿ ಆರೋಪಿ ಸಬ್‌ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಸ್ಟೇಬಲ್‌ರನ್ನು ಸೋಮವಾರ ಅಮಾನತುಗೊಳಿಸಿದ್ದಾರೆ.