ಶಿವಸೇನೆ ಸಂಸದನ ಟಿಕೆಟ್ ರದ್ದುಪಡಿಸಿದ ಏರ್‌ಇಂಡಿಯಾ
ಹಲ್ಲೆ ಪ್ರಕರಣ

ಹೊಸದಿಲ್ಲಿ, ಮಾ.28: ಏರ್‌ಇಂಡಿಯಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್ ಮುಂಗಡವಾಗಿ ಕಾದಿರಿಸಿದ್ದ ಇನ್ನೊಂದು ಟಿಕೆಟನ್ನು ಕೂಡಾ ಏರ್‌ಇಂಡಿಯಾ ಮಂಗಳವಾರ ರದ್ದುಪಡಿಸಿದೆ.
ನಿಷೇಧಕ್ಕೊಳಗಾಗುವ ಮುನ್ನ ಗಾಯಕ್‌ವಾಡ್‌ಗಾಗಿ ಅವರ ಸಿಬ್ಬಂದಿ ಏರ್‌ಇಂಡಿಯಾದ ಟಿಕೆಟ್ ಕಾದಿರಿಸಿದ್ದರು. ಈ ಟಿಕೆಟ್‌ನಲ್ಲಿ ಅವರು ಬುಧವಾರ ಮುಂಬೈಯಿಂದ ದಿಲ್ಲಿಗೆ ಪ್ರಯಾಣಿಸಲಿದ್ದರು. ಗಾಯಕ್‌ವಾಡ್ ಅವರ ಟಿಕೆಟ್‌ನ್ನು ರದ್ದುಪಡಿಸಲಾಗಿದೆಯೆಂದು ಸಾರ್ವಜನಿಕ ರಂಗದ ವಾಯುಯಾನ ಸಂಸ್ಥೆ ಏರ್ ಇಂಡಿಯಾ ಇಂದು ತಿಳಿಸಿದೆ.
ಕಳೆದ ಗುರುವಾರ ಸಂಸದ ಗಾಯಕ್‌ವಾಡ್ ಏರ್‌ಇಂಡಿಯಾದ ಹಿರಿಯ ಉದ್ಯೋಗಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಭಾರೀ ವಿವಾದಕ್ಕೀಡಾಗಿದ್ದರು. ಭಾರತದ ವಾಯುಯಾನ ಇತಿಹಾಸದಲ್ಲೇ ಅಭೂತಪೂರ್ವ ಕ್ರಮವೆಂಬಂತೆ, ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳು ಗಾಯಕ್‌ವಾಡ್ ಅವರನ್ನು ಬಹಿಷ್ಕರಿಸಿದ್ದವು.
ಘಟನೆ ನಡೆದ ಒಂದು ದಿನದ ಬಳಿಕ ಏರ್‌ಇಂಡಿಯಾ ಕಂಪೆನಿಯು ಸಂಸದನ ರಿಟರ್ನ್ ಟಿಕೆಟ್‌ನ್ನು ರದ್ದುಪಡಿಸಿತ್ತು. ಆನಂತರ ಇಂಡಿಗೋ ಏರ್‌ಲೈನ್ಸ್ ಕೂಡಾ ಅದೇ ದಾರಿ ಹಿಡಿಯಿತು. ಆನಂತರ ಅನಿವಾರ್ಯವಾಗಿ ಗಾಯಕ್‌ವಾಡ್ ಅವರು ರೈಲಿನ ಮೂಲಕ ಮಹಾರಾಷ್ಟ್ರಕ್ಕೆ ವಾಪಸಾಗಿದ್ದರು.
ಉಸ್ಮಾನಾಬಾದ್ ಲೋಕಸಭಾ ಕ್ಷೇತ್ರದ ಸದಸ್ಯರಾದ ಗಾಯಕ್‌ವಾಡ್ ಈವರೆಗೂ ತನ್ನ ದುರ್ವರ್ತನೆಗಾಗಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ಏರ್‌ಇಂಡಿಯಾದ ಡ್ಯೂಟಿ ಮ್ಯಾನೇಜರ್ ಆಗಿರುವ ಸುಕುಮಾರನ್ ಅವರನ್ನು ಚಪ್ಪಲಿಯಿಂದ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ಗಾಯಕ್‌ವಾಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈಯಿಂದ ದಿಲ್ಲಿಗೆ ಪ್ರಯಾಣಿಸಿದ್ದ ಅವರು ವಿಮಾನದಲ್ಲಿ ತನಗೆ ಬ್ಯುಸಿನೆಸ್ ಕ್ಲಾಸ್ ಆಸನವನ್ನು ನೀಡದಿರುವುದಕ್ಕಾಗಿ ಅಸಮಾಧಾನಗೊಂಡಿದ್ದರು