ಆಧ್ಯಾತ್ಮಿಕತೆ,ರಾಜಕೀಯದತ್ತ ಮುಖಮಾಡಿದ ನಕ್ಸಲ್ ಸಿದ್ಧಾಂತವಾದಿ-ಲೋಕಗಾಯಕ ಗದ್ದರ್

ಹೈದರಾಬಾದ್,ಮಾ.28: ಜನಪ್ರಿಯ ಕ್ರಾಂತಿಕಾರಿ ಲೋಕಗಾಯಕ ಗದ್ದರ್ ನಕ್ಸಲ್‌ವಾದದಿಂದ ಆಧ್ಯಾತ್ಮಿಕತೆಯವರೆಗೆ ತನ್ನ ಸೈದ್ಧಾಂತಿಕ ಚಿಂತನೆಯ ಸುದೀರ್ಘ ಪಯಣವನ್ನು ಸಾಗಿಬಂದಿದ್ದಾರೆ.
ಸಿಪಿಐ (ಎಂಎಲ್) ಪೀಪಲ್ಸ್ ವಾರ್‌ಗ್ರೂಪ್‌ನ ಸಾಂಸ್ಕೃತಿಕ ಘಟಕ ಜನ ನಾಟ್ಯ ಮಂಡಳಿಯ ಸ್ಥಾಪಕ, 67ರ ಹರೆಯದ ಗದ್ದರ್ ಈಗ ತೆಲಂಗಾಣದ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಒಂದು ಕಾಲದಲ್ಲಿ ತೆಲುಗು ಲೋಕಗಾಯಕ ಗದ್ದರ್‌ರ ಕ್ರಾಂತಿಕಾರಿ ಗೀತೆಗಳನ್ನು ದೇಶಾದ್ಯಂತ ಹಲವರು ಸಶಸ್ತ್ರ ಮಾವೋವಾದಿ ಬಂಡಾಯವನ್ನು ಸೇರಲು ಸ್ಫೂರ್ತಿ ಎಂದೇ ಪರಿಗಣಿಸಲಾಗುತ್ತಿತ್ತು. ಈ ಬಂಡಾಯ ಸರಕಾರದಿಂದ ದಮನಿತರು ಮತ್ತು ದುರ್ಬಲ ವರ್ಗಗಳ ಶೋಷಣೆಯ ವಿರುದ್ಧದ ಯುದ್ಧವೆಂದು ಗದ್ದರ್‌ರ ಗೀತೆಗಳು ಬಿಂಬಿಸಿದ್ದವು.
ಗದ್ದರ್ ಕಳೆದ ವಾರ ಭೊಂಗೀರ್ ಜಿಲ್ಲೆಯ ಯದಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯ ಅಧಿದೇವತೆ ಲಕ್ಷ್ಮೀನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಅರ್ಚಕರು ಅವರನ್ನು ಗರ್ಭಗುಡಿಯೊಳಗೆ ಕರೆದೊಯ್ದು ಆಶೀರ್ವದಿಸಿದ್ದರು.
ನೂತನ ರಾಜ್ಯ ತೆಲಂಗಾಣದಲ್ಲಿ ಸಮೃದ್ಧ ಮಳೆಯಾಗಲಿ ಮತ್ತು ಜನರು ಅನ್ಯಾಯದ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡುವಂತಾಗಲಿ ಎಂದು ತಾನು ದೇವರಲ್ಲಿ ಪ್ರಾರ್ಥಿಸಿದ್ದಾಗಿ ಗದ್ದರ್ ಹೇಳಿದರು.
ಗದ್ದರ್ ಜನವರಿಯಲ್ಲಿ ಜನಗಂ ಜಿಲ್ಲೆಯ ಪಾಲಕುರ್ತಿಯ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಷೇಕವನ್ನು ನೆರವೇರಿಸಿದ್ದರು. ಅದಕ್ಕೂ ಮುನ್ನ ಪತ್ನಿ ವಿಮಲಾ ಮತ್ತು ಸೊಸೆ ಸರಿತಾ ಜೊತೆ ಸಿದ್ದಿಪೇಟ್ ಜಿಲ್ಲೆಯ ಪ್ರಸಿದ್ಧ ಕೊಮುರವೆಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಬಿಲ್ವಾರ್ಚನೆಯನ್ನು ನೆರವೇರಿಸಿದ್ದಲ್ಲದೆ, ಶಿವನನ್ನು ಸ್ತುತಿಸುವ ತನ್ನ ಗೀತೆಗಳಿಂದ ಜನರನ್ನು ಸಂತೋಷಗೊಳಿಸಿದ್ದರು.
ವೇದ ಪಾಠಶಾಲೆಗೂ ತೆರಳಿದ್ದ ಅವರು ವಿದ್ಯಾರ್ಥಿಗಳೊಂದಿಗೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದರು. ವೇದಗಳನ್ನು ಕಲಿಯುವಂತೆ ಸಲಹೆ ನೀಡಿದ್ದ ಅವರು ಸ್ವಾಮಿ ವಿವೇಕಾನಂದರಂತಾಗಲು ಇಂಗ್ಲೀಷ್‌ನ್ನೂ ಕಲಿಯುವಂತೆ ಕಿವಿಮಾತು ಹೇಳಿದ್ದರು.
ಕಳೆದ ಕೆಲವು ದಶಕಗಳಲ್ಲಿ ಗದ್ದರ್‌ರ ಹೆಜ್ಜೆಗಳನ್ನು ಗಮನಿಸಿದ್ದವರಿಗೆ ಅವರ ಈ ನೂತನ ‘ಅವತಾರ ’ ಭಾರೀ ಅಚ್ಚರಿಯನ್ನೇ ಉಂಟುಮಾಡಿದೆ.
ಈಗ ಅವರು ಮಾವೋವಾದಿ ಚಳುವಳಿಯಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ ಅವರಿನ್ನೂ ಮಾರ್ಕ್ಸ್‌ವಾದ ಮತ್ತು ಮಾವೋವಾದದ ಕಟ್ಟಾ ಅನುಯಾಯಿ ಯಾಗಿದ್ದಾರೆ. ಸಹಜವಾಗಿಯೇ ಅವರ ಈ ಹೊಸ ಅವತಾರ ನಮಗೆ ಆಘಾತವ ಬನ್ನುಂಟು ಮಾಡಿದೆ ಎಂದು ಮಾವೋವಾದಿ ಬೆಂಬಲಿಗರೋರ್ವರು ಹೇಳಿದರು.
ಇಂಜಿನಿಯರಿಂಗ್ ಓದಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಬಳಿಕ ಕ್ರಾಂತಿಕಾರಿ ಗಾಯಕರಾಗಿ ಬದಲಾದ ಮೇಡಕ್ ಜಿಲ್ಲೆಯ ತೂರ್ಪನ್ ನಿವಾಸಿ ಗದ್ದರ್ ಸ್ವಾತಂತ್ರ ಪೂರ್ವದ ಪಂಜಾಬ್‌ನ ಪ್ರಸಿದ್ದ ಗದರ್ ಪಾರ್ಟಿಯ ಹೆಸರನ್ನೇ ತನಗೆ ಇಟ್ಟುಕೊಂಡು ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ಮಾವೋವಾದಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನಕಲಿ ಎನ್‌ಕೌಂಟರ್‌ಗಳು ನಡೆದಾಗಲೆಲ್ಲ ಪೊಲೀಸರ ದೌರ್ಜನ್ಯದ ವಿರುದ್ಧ ಧ್ವ ನಿಯನ್ನೆತ್ತುತ್ತಿದ್ದ ಗದ್ದರ್ 2004, ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದ ವೈ.ಎಸ್. ರಾಜಶೇಖರ ರೆಡ್ಡಿ ನೇತೃತ್ವದ ಸರಕಾರವು ಮೊದಲ ಬಾರಿಗೆ ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿದಾಗ ಮುಖ್ಯ ಸಂಧಾನಕಾರರಲ್ಲೋರ್ವರಾಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗದ್ದರ್,ಇದು ನಿಖರವಾಗಿ ರೂಪಾಂತರವಲ್ಲ. ಜನರ ಆಧ್ಯಾತ್ಮಿಕ ಪ್ರಜಾಪ್ರಭುತ್ವವನ್ನು ಗೌರವಿಸುವವನೇ ನಿಜವಾದ ಮಾರ್ಕ್ಸ್‌ವಾದಿ ಯಾಗಿದ್ದಾನೆ. ಜನರು ಕಷ್ಟಗಳಲ್ಲಿದ್ದಾಗ ಧಾರ್ಮಿಕ ಶ್ರದ್ಧೆ ಖಂಡಿತವಾಗಿಯೂ ಅವರಿಗೆ ತಾತ್ಕಾಲಿಕ ನೆಮ್ಮದಿಯನ್ನು ನೀಡುತ್ತದೆ. ಇದು ನಿಜವಾದ ಮಾರ್ಕ್ಸ್‌ವಾದವಾಗಿದೆ ಎಂದರು.
ಕಳೆದ ಎರಡು ದಶಕಗಳಲ್ಲಿ ತೆಲಂಗಾಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದ್ದರ್ ಈಗ ಮಾವೋವಾದಿಗಳ ಮೂಲ ಸಿದ್ಧಾಂತವನ್ನೇ ಮೀರಿ ಚುನಾವಣಾ ರಾಜಕೀಯವನ್ನು ಪ್ರವೇಶಿಸಲು ಚಿಂತನೆ ನಡೆಸಿದ್ದಾರೆ.
ಬಂದೂಕಿನ ನಳಿಕೆಯ ಮೂಲಕ ಅಧಿಕಾರವನ್ನು ಪಡೆಯುವುದರಲ್ಲಿ ನಂಬಿಕೆ ಯಿಟ್ಟಿರುವ ಮಾವೋವಾದಿ ಚಳುವಳಿಯು ಈಗ ತೀವ್ರದಮನಕ್ಕೆ ಒಳಗಾಗಿದೆ. ಹೀಗಾಗಿ ಗುರಿಸಾಧನೆಗಾಗಿ ಸಂಸದೀಯ ಪ್ರಜಾಪ್ರಭುತ್ವ ಮಾರ್ಗವನ್ನು ಆಯ್ದುಕೊಳ್ಳಲು ನಿರ್ಧರಿಸಿದ್ದೇನೆ. ಈ ಬಗ್ಗೆ ಕಾರ್ಯತಂತ್ರ ರೂಪಿಸಲು ಸಮಾಜದ ಹಲವು ವರ್ಗಗಳ ಜನರೊಂದಿಗೆ ಚರ್ಚಿಸುತ್ತಿದ್ದೇನೆ ಎಂದರು.







