ಎನ್ನೆಸ್ಸೆಸ್‌ನಿಂದ ಏಕತೆಯ ಭಾವ ಬೆಳೆಯಲು ಸಾಧ್ಯ: ಪ್ರೊ.ಕೆ.ಭೈರಪ್ಪ
ವಿವಿ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿ ಪ್ರಧಾನ ಸಮಾರಂಭ

ಕೊಣಾಜೆ, ಮಾ.28: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಾವು ತೊಡಗಿಸಿಕೊಳ್ಳುವುದರಿಂದ ಶ್ರದ್ಧೆ, ಶಿಸ್ತಿನ ಜೊತೆಗೆ ಉತ್ತಮ ಸಂಸ್ಕಾರವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ನಮಗೆ ದೇಶಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಅವಕಾಶದೊಂದಿಗೆ ಐಕ್ಯತೆಯ ಕಲ್ಪನೆಯನ್ನು ಬೆಳೆಸಿಕೊಳ್ಳಲು ಸಾಧ್ಯಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಕೆ.ಭೈರಪ್ಪ ಹೇಳಿದರು.
ಮಂಗಳೂರು ವಿವಿಯ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ 2015-16ನೆ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಮತ್ತು ನ್ಯಾಷನಲ್ ಯಂಗ್ ಲೀಡರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಬೆಂಗಳೂರು ರಾ.ಸೇ.ಯೋ. ಪ್ರಾಂತೀಯ ನಿರ್ದೇಶ ನಾಲಯದ ಯೂತ್ ಆಫೀಸರ್ ಕಾರ್ತಿಕೇಯನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ 2015-16ನೆ ಸಾಲಿನ ವಿವಿ ಮಟ್ಟದ ಅತ್ಯುತ್ತಮ ರಾ.ಸೇ.ಯೋ. ಘಟಕ ಪ್ರಶಸ್ತಿಯನ್ನು ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಪಡೆದುಕೊಂಡಿತು. ಪ್ರಾಂಶುಪಾಲರಾದ ಪ್ರೊ. ಮೋಹನ್ ನಾರಾಯಣ್ ಹಾಗೂ ಡಾ.ಉದಯ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜು ಉಜಿರೆಯ ಭಾನುಪ್ರಕಾಶ್ ಹಾಗೂ ಮಂಗಳೂರು ವಿವಿ ಕಾಲೇಜಿನ ಡಾ.ದಯಾನಂದ ನಾಯ್ಕಿ ಅವರು ಪಡೆದುಕೊಂಡರು.
ಅತ್ಯುತ್ತಮ ರಾ.ಸೇ.ಯೋ. ಸ್ವಯಂ ಸೇವಕ ಪ್ರಶಸ್ತಿಯನ್ನು ಕೆನರಾ ಕಾಲೇಜಿನ ಶಶಾಂಕ್ ಶೆಟ್ಟಿ, ಸಂತ ಆಗ್ನೆಸ್ ಕಾಲೇಜಿನ ಸವಿತಾ ಕೆ., ನಂತೂರು ಪಾದುವಾ ಕಾಲೇಜಿನ ವಿಸ್ಮಿತಾ ಹಾಗೂ ಮಂಗಳೂರು ಮಿಫ್ಟ್ ಕಾಲೇಜಿನ ಮದುಷಾ ಬಿ.ಎಂ. ಪಡೆದುಕೊಂಡರು. ವಿವಿ ಮಟ್ಟದ ನ್ಯಾಷನಲ್ ಯಂಗ್ ಲೀಡರ್ಸ್ ಪ್ರಶಸ್ತಿಯನ್ನು ಮಂಗಳೂರು ಸಂತ ಆಗ್ನೆಸ್ ಕಾಲೇಜಿನ ರಾ.ಸೇ.ಯೋ. ಘಟಕದ ಯೋಜನಾಧಿಕಾರಿ ಡಾ.ಉದಯ್ ಕುಮಾರ್ ಬಿ., ಮಂಗಳೂರು ಪಾದುವಾ ಕಾಲೇಜಿನ ರಾ.ಸೇ.ಯೋ. ಘಟಕದ ಯೋಜನಾಧಿಕಾರಿ ಶ್ರೀಧರ್, ಗೋಣಿಕೊಪ್ಪ, ಕಾವೇರಿ ಕಾಲೇಜಿನ ರಾ.ಸೇ.ಯೋ. ಘಟಕದ ಯೋಜನಾಧಿಕಾರಿ ವಿನಿತ್ ಕುಮಾರ್, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಪುಷ್ಪರಾಜ್ ಪಡೆದುಕೊಂಡರು. ರಾ.ಸೇ.ಯೋ. ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ವಿನಿತಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಸೇಯೋ ಯೂತ್ ಆಫಿಸರ್ ಸಂತೋಷ್ ಅತಿಥಿಯಾಗಿ ಭಾಗವಹಿಸಿದ್ದರು. ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಯೋಜನಾಧಿಕಾರಿ ಜೋಸೆಫ್ ಎಂ.ಎನ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







