ಚಾರಿತ್ರಭರಿತ ಶಿಕ್ಷಣ ಇಂದಿನ ಅಗತ್ಯ: ಡಾ.ರವಿ
ಅಂತಾರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು, ಮಾ.28: ಇಂದಿನ ಯುವಜನತೆ ವಿಚಾರಗಳ ಆಯ್ಕೆಯಲ್ಲಿ ಗೊಂದಲಕ್ಕೆ ಸಿಲುಕುತ್ತಿದ್ದು, ಶಿಕ್ಷಣದಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೆ ಇರುವುದೇ ಪ್ರಮುಖ ಕಾರಣ. ಈ ಕಾರಣದಿಂದ ಚಾರಿತ್ರಭರಿತ ಶಿಕ್ಷಣ ಇಂದಿನ ಅಗತ್ಯವೆಂದು ದ.ಕ. ಜಿಪಂನ ಸಿಇಒ ಡಾ.ಎಂ.ಆರ್.ರವಿ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಘಟಕ, ಡಾ.ಪಿ.ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ನೇತ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆ ಆದರೆ, ಅಜೀರ್ಣ ದಿಂದ ಸಾಯುವವರು ಹೆಚ್ಚಾಗುತ್ತಿದ್ದಾರೆ. ಯುವ ಜನತೆ ಬೇಕಾಬಿಟ್ಟಿ ಆಹಾರ ಸೇವನೆ, ಕೆಟ್ಟ ಜೀವನಶೈಲಿ ವಿವಿಧ ಸಮಸ್ಯೆ ಹಾಗೂ ಸವಾಲಿಗೆ ಗುರಿಯಾಗಿದ್ದಾರೆ. ಯುವಜನತೆ ಉತ್ತಮ ಆಲೋಚನೆ, ವೌಲ್ಯಗಳನ್ನು ಮೈಗೂಡಿಸುವ ಕೆಲಸ ನಡೆಯಬೇಕು ಎಂದರು.
ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಚ್‌ಐವಿ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರದ ಕುರಿತು ಬಿಕಾಂ ವಿದ್ಯಾರ್ಥಿ ವಿದ್ಯಾ ಮಾತನಾಡಿದರು. ಯುವಜನತೆ ಮತ್ತು ಎಚ್‌ಐವಿ ಕುರಿತು ಬಿಎ ವಿಭಾಗದ ಸಿಂಧೂರಾ ಹಾಗೂ ಎಚ್‌ಐವಿ ಏಡ್ಸ್ ನಿಯಂತ್ರಣ ಕುರಿತು ಡಾ.ಅಶೋಕ್, ನೇತ್ರದಾನ ಕುರಿತು ಡಾ.ರತ್ನಾಕರ್ ವಿವರಿಸಿದರು. ಈ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ಹಿರಿಯ ಶಸಚಿಕಿತ್ಸಕ ಡಾ.ರಾಜೇಶ್ವರಿ ದೇವಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್, ಉಪನ್ಯಾಸಕ ಡಾ.ನವೀನ್ ಕೊಣಾಜೆ, ಪ್ರೊ.ಜೆಫ್ರಿ ರಾಡ್ರಿಗಸ್ ಉಪಸ್ಥಿತರಿದ್ದರು.
ಡಾ. ಶಿವರಾಂ ಸ್ವಾಗತಿಸಿದರು.







