ಬಾಬರಿ ವಿವಾದ: ನ್ಯಾಯಾಲಯದ ಹೊರಗೆ ಸಂಧಾನಕ್ಕೆ ಎಐಎಂಪಿಎಲ್‌ಬಿ ಸಿದ್ಧ

ಪೈಜಾಬಾದ್/ ಅಯೋಧ್ಯೆ, ಮಾ.29: ಬಾಬರಿ ಮಸೀದಿ-ರಾಮ ಜನ್ಮೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಹಿಂದೂ ಸಂಘಟನೆಗಳ ಜತೆ ಸಂಧಾನ ಮಾತುಕತೆಗೆ ಸಿದ್ಧ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಘೋಷಿಸಿದೆ.
ಎರಡು ಪಕ್ಷಗಳ ನಡುವೆ ಶಾಂತಿಯುತ ಸಂಧಾನ ಮಾತುಕತೆ ನಡೆಯುವ ಅವಕಾಶವಿದ್ದರೆ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಮಾತುಕತೆ ಅಗತ್ಯ ಹಾಗೂ ನಾವು ಸದಾ ಅದಕ್ಕೆ ಸಿದ್ಧರಿದ್ದೇವೆ. ಆದರೆ ಅದಕ್ಕೂ ಮುನ್ನ ಸುಪ್ರೀಂಕೋರ್ಟ್, ಮಾತುಕತೆಯ ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು. ಅಂತೆಯೇ ಹಿಂದೂ ಪಕ್ಷಗಳನ್ನು ಸಂಧಾನಕ್ಕೆ ನೇಮಕ ಮಾಡಲು ಅಧಿಕಾರ ನೀಡಬೇಕು ಎಂದು ಮಂಡಳಿಯ ಕಾರ್ಯಕಾರಿಣಿ ಸದಸ್ಯ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಹಾಲಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನ ಮಾತುಕತೆಗೆ ಮುಂದಾಗುವ ಮುನ್ನ ಉಭಯ ಪಕ್ಷಗಳಿಗೆ ಸಮಾನ ಸ್ಥಾನಮಾನ ಕಲ್ಪಿಸಬೇಕು ಎಂದು ಎಐಎಂಪಿಎಲ್‌ಬಿಯ ಬಾಬರಿ ಮಸೀದಿ ಘಟಕದ ಸಂಚಾಲಕ ಸಯ್ಯದ್ ಕಾಸಿಂ ರಸೂಲ್ ಇಲ್ಯಾಸ್ ಸ್ಪಷ್ಟಪಡಿಸಿದ್ದಾರೆ.
ಎಐಎಂಪಿಎಲ್‌ಬಿ ಭಾರತೀಯ ಮುಸ್ಲಿಮರ ಧಾರ್ಮಿಕ ಹಾಗೂ ಸಾಮಾಜಿಕ ಪ್ರಾತಿನಿಧಿಕ ಸಂಸ್ಥೆಯಾಗಿದೆ.
ಮಾತುಕತೆ ಆರಂಭವಾದರೆ ಅದು ಸುಪ್ರೀಂಕೋರ್ಟ್‌ನ ಸುಪರ್ದಿಯಲ್ಲಿ ನಡೆಯಬೇಕು. ಹಿಂದೆ ಕೂಡಾ ಕೆಲ ಮಾತುಕತೆಗಳು ನಡೆದಿದ್ದರೂ, ಯಾವುದೇ ಫಲ ಸಿಕ್ಕಿಲ್ಲ. ವಿಶ್ವ ಹಿಂದೂ ಪರಿಷತ್ ಹಾಗೂ ಮುಸ್ಲಿಂ ಸಂಘಟನೆಗಳು ವೈಫಲ್ಯಕ್ಕೆ ಪರಸ್ಪರರನ್ನು ದೂಷಿಸಿದ್ದವು ಎನ್ನುವುದು ಸಂಸ್ಥೆಯ ಅಭಿಪ್ರಾಯ. ಮಾತುಕತೆಯ ವೈಫಲ್ಯಕ್ಕೆ ಮುಖ್ಯ ಕಾರಣವೆಂದರೆ, ವಿಎಚ್‌ಪಿ ಪ್ರತಿ ಹಂತದಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು ಎಂದು ಪ್ರಕರಣ ಹೂಡಿರುವ ಖಲೀಕ್ ಅಹ್ಮದ್ ಖಾನ್ ದೂರಿದ್ದಾರೆ.







